ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣದ ಅಂತಿಮ ಹಂತದ ವಿನ್ಯಾಸವನ್ನು ಶಾಸಕ ಜಿ.ಎಸ್. ಪಾಟೀಲ ಪರಿಶೀಲಿಸಿದರು. ರೋಪ್ ವೇ ನಿರ್ಮಾಣ ಅಂದಾಜು ಎರಡು ತಿಂಗಳಲ್ಲಿ ಪೂರ್ಣಗೊಳ್ಳವ ಸಾಧ್ಯತೆಯಿದೆ. ಸಾರ್ವಜನಿಕ ಸಹಭಾಗಿತ್ವವಾಗಿದ್ದು, ಖಾಸಗಿ ವ್ಯಕ್ತಿಗಳು ನಡೆಸಲಿದ್ದಾರೆ.
ಎಸ್.ಎಂ. ಸೈಯದ್
ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿನ ದಕ್ಷಿಣಕಾಶಿ ಎಂದು ಪ್ರಸಿದ್ಧಿ ಪಡೆದಿರುವ, ಅಸಂಖ್ಯಾತ ಭಕ್ತ ಸಮೂಹದ ಆರಾಧ್ಯದೈವ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣದ ಅಂತಿಮ ಹಂತದ ವಿನ್ಯಾಸವನ್ನು ಶಾಸಕ ಜಿ.ಎಸ್. ಪಾಟೀಲ ಪರಿಶೀಲನೆ ನಡೆಸಿದ್ದು, ಭಕ್ತ ಸಮೂಹ ಹಾಗೂ ಪ್ರವಾಸಿಗರಲ್ಲಿ ಸಂಭ್ರಮ ಮನೆ ಮಾಡಿದೆ.
ರಾಜ್ಯ ಸರ್ಕಾರ ಹೊಸ ಪ್ರವಾಸಿ ಹಾಗೂ ಐತಿಹಾಸಿಗಳ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಪ್ರಮುಖ ೧೨ ಸ್ಥಳಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೋಪ್ ವೇ ಸೌಲಭ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಕಾಲಕಾಲೇಶ್ವರ ದೇವಸ್ಥಾನ ಬಳಿ ಸಮೀಕ್ಷೆ ನಡೆಸಲಾಗಿತ್ತು.
ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆಟಿಐಎಲ್) ಮೂಲಕ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಕೋರಿಕೆಯಂತೆ, ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ೨೦೨೪ ಜೂ. ೧೫ರಂದು ಸರ್ಕಾರದ ನಿಯಮಾವಳಿ ಪಾಲಿಸುವಂತೆ ಸೂಚಿಸಿದ್ದರು.
ಸಾಕಾರದತ್ತ ಪ್ರವಾಸಿ ತಾಣದ ಕೂಗು: ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ತಾಲೂಕಿನ ಸೂಡಿ, ಇಟಗಿ, ಕಾಲಕಾಲೇಶ್ವರ, ರೋಣ, ಡಂಬಳ ಸೇರಿ ಅನೇಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಬೇಕು ಎಂಬ ಕೂಗಿತ್ತು. ಬೆಟ್ಟಗಳ ಸಾಲಿನಲ್ಲಿರುವ ಹಾಗೂ ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ, ಪಟ್ಟಣದಿಂದ ೫ ಕಿಮೀ ದೂರದಲ್ಲಿನ ಕಾಲಕಾಲೇಶ್ವರ ದೇವಸ್ಥಾನಕ್ಕೆ ರಾಜ್ಯ ಸೇರಿ ಹೊರ ರಾಜ್ಯಗಳ ಪ್ರವಾಸಿಗರು ಮತ್ತು ಭಕ್ತರು ಆಗಮಿಸುತ್ತಾರೆ. ಶಾಸಕ ಜಿ.ಎಸ್. ಪಾಟೀಲ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.
ಉದ್ಯೋಗ ಸೃಷ್ಟಿ ನಿರೀಕ್ಷೆ: ಪಟ್ಟಣ ಸೇರಿ ರೋಣ ಮತಕ್ಷೇತ್ರದಲ್ಲಿ ಹೇಳಿಕೊಳ್ಳುವ ಕೈಗಾರಿಕೆಗಳು ಇಲ್ಲ. ತಾಲೂಕಿನ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಹುಬ್ಬಳ್ಳಿ, ಮಂಗಳೂರು, ಗೋವಾ ಮತ್ತಿತರ ಶಹರಗಳಿಗೆ ಹೋಗುವುದು ಸಾಮಾನ್ಯ. ಆದರೆ ಈಗ ರಾಜ್ಯ ಸರ್ಕಾರ ರೋಪ್ ವೇ ನಿರ್ಮಾಣಕ್ಕೆ ಹೆಜ್ಜೆಯನ್ನಿಟ್ಟಿರುವುದರಿಂದ ತಾಲೂಕಿನ ಸೂಡಿ ಜೋಡಿ ಕಳಸ, ಇಟಗಿ ಭೀಮಾಂಬಿಕಾ ದೇವಸ್ಥಾನ, ಗಜೇಂದ್ರಗಡ ಕೋಟೆ, ಇತರ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದಾಗಿ ಉಂಟಾಗುವ ವ್ಯಾಪಾರ-ವಹಿವಾಟಿನಿಂದ ದುಡಿಯುವ ಕೈಗಳಿಗೆ ಉದ್ಯೋಗ ಸಿಗುವ ಆಸೆ ಚಿಗುರೊಡದಿದೆ.
ಭಕ್ತರಿಗೆ ಅನುಕೂಲ: ಕಾಲಕಾಲೇಶ್ವರ ದೇವಸ್ಥಾನಕ್ಕೆ ಭಕ್ತರು ೧೦೦ಕ್ಕೂ ಅಧಿಕ ಮೆಟ್ಟಿಲುಗಳನ್ನು ಹತ್ತಬೇಕಿದ್ದು, ದೇವರ ದರ್ಶನಕ್ಕೆ ವೃದ್ಧರು ಹಾಗೂ ಅಂಗವಿಕಲರು ಪರದಾಡಬೇಕಾಗಿತ್ತು. ಶಾಸಕ ಜಿ.ಎಸ್. ಪಾಟೀಲ ೨೦೨೪ರಲ್ಲಿ ರೋಪ್ ವೇ ನಿರ್ಮಿಸಲು ಪ್ರಸ್ತಾವನೆ ಜತೆಗೆ ಸಚಿವರ ಗಮನ ಸೆಳೆದಿದ್ದರು. ಈಗ ರೋಪ್ ವೇ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.
ರೋಪ್ ವೇ ನಿರ್ಮಾಣ ಅಂದಾಜು ಎರಡು ತಿಂಗಳಲ್ಲಿ ಪೂರ್ಣಗೊಳ್ಳವ ಸಾಧ್ಯತೆಯಿದೆ. ಸಾರ್ವಜನಿಕ ಸಹಭಾಗಿತ್ವವಾಗಿದ್ದು, ಖಾಸಗಿ ವ್ಯಕ್ತಿಗಳು ನಡೆಸಲಿದ್ದಾರೆ. ಬಂದ ಹಣದಲ್ಲಿ ಶೇ. ೩೦ರಷ್ಟು ಸರ್ಕಾರಕ್ಕೆ ಜಮಾ ಆಗಲಿದೆ.
ಪ್ರವಾಸಿ ತಾಣ ಪರಿಚಯಿಸುವ ಕಾರ್ಯ: ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಜತೆಗೆ ಪ್ರವಾಸೋದ್ಯಮವನ್ನು ಮುನ್ನಲೆಗೆ ತರುವ ಉದ್ದೇಶದಿಂದ ತಾಲೂಕಿನಲ್ಲಿ ದಕ್ಷಿಣಕಾಶಿ ಕಾಲಕಾಲೇಶ್ವರ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳನ್ನು ನಾಡಿನೆಲ್ಲೆಡೆ ಪರಿಚಯಿಸುವ ಕಾರ್ಯ ನಡೆಸುತ್ತೇನೆ ಎಂದು ರೋಣ ಮತಕ್ಷೇತ್ರ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.