ಕನಕಗಿರಿ: ಭಾನುವಾರ ರಾತ್ರಿ ಪಟ್ಟಣ ಸೇರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಮಳೆ ಸುರಿದಿದೆ.
ಎಲ್ಲೆಂದರಲ್ಲಿ ಮರಗಿಡಗಳು ನೆಲಕ್ಕುರುಳಿ ರಸ್ತೆಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಪಟ್ಟಣದ ದ್ಯಾಮವ್ವನಗುಡಿ ಬಳಿಯ ಪುರಾತನ ಬಸರಿಮರದ ಕೊಂಬೆಯೊಂದು ಮುರಿದು ಮೂರು ಬೈಕ್ ಜಖಂಗೊಂಡಿವೆ. ಇನ್ನೂ ಮಹಿಷಾಸುರ ಮರ್ದಿನಿ ದೇಗುಲದ ಹಿಂಭಾಗದಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಗ್ಯಾಸ್ ಸೋರಿಕೆಯಾಗಿದ್ದರಿಂದ ಸಿಲಿಂಡರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಂಗಡಿಯಲ್ಲಿದ್ದ ಟೇಬಲ್, ಗ್ಯಾಸ್ ಕೇಬಲ್, ವೈರ್ ಸೇರಿದಂತೆ ನಾನಾ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಗ್ಯಾಸ್ ಖಾಲಿಯಾಗುತ್ತಿದ್ದಂತೆ ಜನ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಸಾಗರ ಅಚ್ಚಲಕರ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.
ಬಿರುಗಾಳಿಗೆ ಕಿತ್ತುಹೋದ ಶೆಡ್‌ಗಳು, ಸಿಡಿಲಿಗೆ ಎತ್ತು, ಎಮ್ಮೆ ಬಲಿಯಲಬುರ್ಗಾ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ.
ತೋಟಗಾರಿಗೆ ಇಲಾಖೆಗೆ ಸಂಬಂಧಿಸಿದ ನಾನಾ ಬೆಳೆಗಳು ಅಂದಾಜು ೨೪ ಹೆಕ್ಟೇರ್ ಪ್ರದೇಶ ನಷ್ಟವಾಗಿದೆ. ಎರಡು ದಿನ ಸುರಿದ ಮಳೆಯಿಂದಾಗಿ ಭೂಮಿ ತಂಪಾಗಿವೆ. ಇದರಿಂದ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಿದೆ.ಸಿಡಿಲಿಗೆ ಎತ್ತು, ಎಮ್ಮೆ ಬಲಿ: ತಾಲೂಕಿನ ಹಗೇದಾಳ ಗ್ರಾಮದ ನೀಲಪ್ಪ ಹೊಳಿಯಪ್ಪ ಚೂರಿ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮೃತಪಟ್ಟಿದೆ. ಮದ್ಲೂರು ಗ್ರಾಮದ ಲಕ್ಷ್ಮಪ್ಪ ಮಲ್ಲಪ್ಪ ಹಡಪದ ಅವರಿಗೆ ಸೇರಿದ ಎಮ್ಮೆ ಸಿಡಿಲಿಗೆ ಬಲಿಯಾಗಿದೆ. ದಮ್ಮೂರು ಗ್ರಾಮದ ವಿರೂಪಣ್ಣ ಹಳ್ಳಿಕೇರಿ ಅವರ ಎಮ್ಮೆ ಸಿಡಿಲಿಗೆ ಸತ್ತಿದೆ. ಸ್ಥಳಕ್ಕೆ ಕಂದಾಯ ಇಲಾಖೆ, ಗ್ರಾಪಂ ಹಾಗೂ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರಕ್ಕಾಗಿ ಪಂಚನಾಮೆ ವರದಿಯನ್ನು ತಾಲೂಕಾಡಳಿತಕ್ಕೆ ಸಲ್ಲಿಸಿದ್ದಾರೆ.