ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು, ಮಲೆನಾಡು ಭಾಗದಲ್ಲಿ ತೀವ್ರವಾಗಿರುವ ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಬಗರ್‌ಹುಕುಂ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಿದ್ದ ಬೇಲೂರು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದಿವು. ರೈತ ಸಂಘದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಚನ್ನಕೇಶವ ದೇಗುಲದಿಂದ ಪ್ರತಿಭಟನೆ ಹೊರಟು ಕೆಂಪೇಗೌಡರ ಸರ್ಕಲ್ ಮತ್ತು ಬಸವೇಶ್ವರ ಸರ್ಕಲ್ ಮೂಲಕ ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಪ್ರಮುಖ ಸ್ಥಳಗಳಲ್ಲಿ ಜಮಾಯಿಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಹೋಟೆಲ್‌ಗಳು, ಬೇಕರಿಗಳು ಸೇರಿದಂತೆ ಹಲವು ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಬಂದ್‌ನಿಂದ ದೂರದ ಊರುಗಳಿಂದ ಬೇಲೂರಿಗೆ ಆಗಮಿಸಿದ್ದ ಪ್ರಯಾಣಿಕರು ಹಾಗೂ ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಹೋಟೆಲ್‌ಗಳು ಮತ್ತು ಬೇಕರಿಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಊಟ, ತಿಂಡಿ ಹಾಗೂ ಅಗತ್ಯ ವಸ್ತುಗಳನ್ನು ಪಡೆಯಲು ಪ್ರವಾಸಿಗರು ಪರದಾಡಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಪಟ್ಟಣದ ಹೊರವಲಯದಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಸ್ ತೆರಳಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುತ್ತಾ ಪರದಾಡುವಂತಾಗಿತ್ತು. ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ತಮ್ಮ ಸ್ಥಾನ ತಲುಪಲು ಪರ್ಯಾಯ ವ್ಯವಸ್ಥೆ ಹುಡುಕುವ ಪರಿಸ್ಥಿತಿ ಎದುರಾಯಿತು.ಬಂದ್ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಸಾಮಾನ್ಯವಾಗಿ ಜನಜಂಗುಳಿಯಿಂದ ಕೂಡಿರುವ ವಾಣಿಜ್ಯ ಪ್ರದೇಶಗಳಲ್ಲಿಯೂ ಜನಸಂಚಾರ ವಿರಳವಾಗಿತ್ತು. ತಾಲೂಕು ಬರ ಘೋಷಣೆ, ಕಾಡಾನೆ ಹಾವಳಿ, ಬಗರ್‌ಹುಕುಂ ಸಮಸ್ಯೆಗೆ ಆಗ್ರಹಿಸಿ ರೈತಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿ ನೆರವೇರಿತು.ಫೊಟೋ|: