ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು?

KannadaprabhaNewsNetwork |  
Published : Oct 29, 2026, 01:45 AM IST
ಸಂಗ್ರಹ ಚಿತ್ರ | Kannada Prabha

ಸಾರಾಂಶ

ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ೯ರಿಂದ ಬೆಳಿಗ್ಗೆ ೬ ಗಂಟೆ ತನಕ ಇರುವ ಸಂಚಾರ ನಿಷೇಧ ತೆರವುಗೊಳಿಸಿ, ಸುರಂಗ ಮಾರ್ಗ ಅಥವಾ ಎತ್ತರಿಸಿದ ಕಾರಿಡಾರ್ ನಿರ್ಮಾಣ ಮಾಡುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ಕೇವಲ ರಾಜಕೀಯ ಸ್ಟಂಟ್ ಮತ್ತು ವೋಟ್ ಬ್ಯಾಂಕ್ ರಾಜಕಾರಣವಲ್ಲವೆ ಎಂಬ ಪ್ರಶ್ನೆ ಮೂಡಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ೯ರಿಂದ ಬೆಳಿಗ್ಗೆ ೬ ಗಂಟೆ ತನಕ ಇರುವ ಸಂಚಾರ ನಿಷೇಧ ತೆರವುಗೊಳಿಸಿ, ಸುರಂಗ ಮಾರ್ಗ ಅಥವಾ ಎತ್ತರಿಸಿದ ಕಾರಿಡಾರ್ ನಿರ್ಮಾಣ ಮಾಡುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ಕೇವಲ ರಾಜಕೀಯ ಸ್ಟಂಟ್ ಮತ್ತು ವೋಟ್ ಬ್ಯಾಂಕ್ ರಾಜಕಾರಣವಲ್ಲವೆ ಎಂಬ ಪ್ರಶ್ನೆ ಮೂಡಿದೆ.

ಅ.೨೮ರ ಕನ್ನಡಪ್ರಭ ‘ಡಿಕೆ,ಕೇರಳ ಸಿಎಂ ಬಂಡೀಪುರ ಚರ್ಚೆ’ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದು, ಇದಕ್ಕೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತಾಪದ ಗೊಂದಲ:

ಬೆಂಗಳೂರು-ಮೈಸೂರು ಎನ್‌ಎಚ್‌ ಮಾದರಿಯಲ್ಲಿ ಬಂಡೀಪುರದಲ್ಲಿ ಎತ್ತರಿಸಿದ ಕಾರಿಡಾರ್ ಮಾಡುವ ಪ್ರಸ್ತಾಪವಿದೆ. ಆದರೆ ಇದು ಆನೆ, ಹುಲಿ ಸೇರಿದಂತೆ ವನ್ಯಜೀವಿಗಳ ನೈಸರ್ಗಿಕ ಕಾರಿಡಾರ್‌ಗೆ ಅಡ್ಡಿಯಾಗುತ್ತದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೇರೆ ಹೆದ್ದಾರಿಗಳಲ್ಲಿ ಮಾಡಿದ ಕೆಲಸಕ್ಕೂ ಇದಕ್ಕೂ ಹೋಲಿಕೆ ಸಾಧ್ಯವಿಲ್ಲ.

ಸುರಂಗ ಮಾರ್ಗ, ದುಬಾರಿ ಯೋಜನೆ:

೧೧ ಕಿ.ಮೀ ಅಥವಾ ೧೩ ಕಿಮೀ ಸುರಂಗ ಮಾರ್ಗ ನಿರ್ಮಾಣಕ್ಕೆ ಸಾವಿರಾರು ಕೋಟಿ ರು. ಹಣಬೇಕು. ಬೃಹತ್‌ ಈ ಯೋಜನೆಗೆ ಹಣ ಯಾರು ಕೊಡುತ್ತಾರೆ? ಕೇಂದ್ರವೋ ಅಥವಾ ಎರಡೂ ರಾಜ್ಯಗಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸುಪ್ರೀಂ ಕೋರ್ಟ್‌ ಒಪ್ಪಿಗೆ ಸಿಗುತ್ತದೆಯೇ?

ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರೂ, ಅಂತಿಮವಾಗಿ ಸುಪ್ರೀಂ ಕೋರ್ಟ್ ಒಪ್ಪಬೇಕು. ವನ್ಯಜೀವಿ ಹಿತದೃಷ್ಟಿಯಿಂದ ಕೋರ್ಟ್ ಈಗಾಗಲೇ ರಾತ್ರಿ ಸಂಚಾರ ನಿಷೇಧವನ್ನು ಎತ್ತಿಹಿಡಿದಿದೆ.

ಚುನಾವಣಾ ಭರವಸೆ?

ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರು ಕೇರಳ ಚುನಾವಣೆ ಸಮಯದಲ್ಲಿ ರಾತ್ರಿ ಸಂಚಾರ ತೆರವುಗೊಳಿಸುವ ಭರವಸೆ ನೀಡಿದ್ದರು ಎನ್ನಲಾಗುತ್ತಿದೆ. ಇದು ರಾಜಕೀಯ ಆಶ್ವಾಸನೆ ಆಗಿ ಉಳಿದಿದೆಯೇ ಹೊರತು,ವಾಸ್ತವದಲ್ಲಿ ಜಾರಿಯಾಗಿಲ್ಲ.

ವಾಸ್ತವ ಏನು?:

ಬಂಡೀಪುರದ ರಾತ್ರಿ ೯ರಿಂದ ಬೆಳಿಗ್ಗೆ ೬ ಗಂಟೆ ತನಕ ರಾತ್ರಿ ಸಂಚಾರ ನಿಷೇಧವು ವನ್ಯಜೀವಿಗಳ ರಕ್ಷಣೆಗೆ ಅತ್ಯಂತ ಅವಶ್ಯಕ. ಈ ಅವಧಿಯಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಿರುತ್ತದೆ. ಈ ನಿಷೇಧವನ್ನು ತೆಗೆದರೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ಡಿಪಿಆರ್‌ ಮತ್ತು ರಸ್ತೆ ನಕ್ಷೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ವಿರೋಧದ ನಿಲುವೇ ಈಗ ವನ್ಯಜೀವಿ ಹಿತದ ದಾರಿಯಾಗಿದೆ. ಅಲ್ಲದೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್‌ ಅವರು ಕೂಡ ರಾತ್ರಿ ಸಂಚಾರ ನಿಷೇಧ ಇರಲಿ,ಕಾಡು ನಾಶಕ್ಕೆ ಅವಕಾಶ ಬೇಡ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್
ಕಸ ವಿಲೇ ವಿಚಾರಕ್ಕೆ ಹಲ್ಲೆ: ಕೇಸ್‌ ರದ್ದತಿಗೆ ಹೈಕೋರ್ಟ್ ನಿರಾಕರಣೆ