ರಾಮನಗರ: ವಿಧಾನ ಪರಿಷತ್ ನ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಶೇ.78.88ರಷ್ಟು ಮತದಾನ ಆಗಿದೆ.
ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಮನಗರದ ತಾಲೂಕು ಆಡಳಿತ ಸೌಧದ ಮತಗಟ್ಟೆ ಆವರಣ ಜನಜಂಗುಳಿಯಿಂದ ತುಂಬಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಇಡೀ ದಿನ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಕೆಲವು ಪ್ರಭಾವಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತ ಕೇಂದ್ರದ ಹೊರಗೆ ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರನ್ನು ಓಲೈಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಕಾಂಗ್ರೆಸ್ ವತಿಯಿಂದ ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ಹಾಗೂ ಬಿಜೆಪಿ - ಜೆಡಿಎಸ್ ಪರವಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತಯಾಚಿಸಿದರು.
28 ಮತಗಟ್ಟೆಗಳಲ್ಲಿ ಮತದಾನ
ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕುದೂರು ಗ್ರಾಮ ಪಂಚಾಯಿತಿ ಕಚೇರಿ, ತಿಪ್ಪಸಂದ್ರ ಹೋಬಳಿಯ ಗ್ರಾಪಂ ಕಚೇರಿ, ಸೋಲೂರು ಹೋಬಳಿಯ ಗ್ರಾಪಂ ಕಚೇರಿ, ಮಾಗಡಿ ತಹಸೀಲ್ದಾರ್ ಕಚೇರಿಯ ಕೋರ್ಟ್ ಹಾಲ್ ಕೊಠಡಿ ಸಂಖ್ಯೆ- 1 ಹಾಗೂ ತಹಸೀಲ್ದಾರ್ ಗ್ರೇಡ್- 1 ಕಚೇರಿಯ ಕೊಠಡಿ ಸಂಖ್ಯೆ-2, ತಹಸೀಲ್ದಾರ್ ಕಚೇರಿಯ ಆಡಳಿತಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ- 3ರಲ್ಲಿ ಮತದಾನ ನಡೆಯಿತು.
ಚನ್ನಪಟ್ಟಣ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿಯ ಕೊಠಡಿ ಸಂಖ್ಯೆ- 1 ಹಾಗೂ 2, ತಾಲೂಕು ಪಂಚಾಯತ್ ಕಚೇರಿ, ಸಾಮರ್ಥ್ಯ ಸೌಧದ ತರಬೇತಿ ಕೇಂದ್ರ, ದೊಡ್ಡ ಮಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ- 1 ಹಾಗೂ 2, ಕೋಡಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕೊಠಡಿ ಸಂಖ್ಯೆ-1 ಹಾಗೂ 2ರಲ್ಲಿ ಮತದಾನ ನಡೆಯಿತು. ಹಾರೋಹಳ್ಳಿ ತಾಲೂಕಿನ ಕೆಪಿಎಸ್ ಜಿಎಚ್ ಪಿಎಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 1 ಮತ್ತು 2ರಲ್ಲಿ ಮತದಾನ ನಡೆಯಿತು. ಕನಕಪುರ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿಯ ಕೊಠಡಿ ಸಂಖ್ಯೆ 1, 2, 3 ಹಾಗೂ 4ರಲ್ಲಿ ಮತದಾನ ನಡೆಯಿತು.
4.ಕನಕಪುರ ತಾಲೂಕು ಆಡಳಿತ ಸೌಧದಲ್ಲಿ ಪದವೀಧರ ಮತದಾರರು ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಮತದಾನ ಮಾಡಲು ಸಾಲಾಗಿ ನಿಂತಿರುವುದು.