ಬಂಜಾರರು ಏಕತೆ ಜತೆ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ: ಸೈನಾ ಭಗತ್ ಸ್ವಾಮೀಜಿ

KannadaprabhaNewsNetwork | Published : Jun 23, 2024 2:02 AM

ಸಾರಾಂಶ

ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ತಾಂಡಾದಲ್ಲಿನ ಬಂಜಾರ ನೌಕರರ ಸೌಹಾರ್ದ ಸಹಕಾರಿ ಸಂಘದ ಆರನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ಬೆಂಡೆಕಟ್ಟೆ ತಾಂಡಾದಲ್ಲಿನ ಬಂಜಾರ ನೌಕರರ ಸೌಹಾರ್ದ ಸಹಕಾರಿ ಸಂಘದ ಆರನೇ ವರ್ಷದ ವಾರ್ಷಿಕ ಮಹಾಸಭೆ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಸಾಲೂರು ಮಠದ ಸೈನಾ ಭಗತ್ ಮಹಾರಾಜ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಾಂಗದಲ್ಲಿ ಏಕತೆ, ಒಗ್ಗಟ್ಟಿನ ಕೊರತೆ ಇದೆ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಇತರೆ ಜನಾಂಗದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಿರು ವುದನ್ನು ನೋಡಿ ಸಮುದಾಯದ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದ ಅವರು ನೌಕರರು ಸಮಾಜದ ಹಿತಾಸಕ್ತಿಯನ್ನು ಅರಿತು ತೊಡಕುಗಳನ್ನು ತಿದ್ದಿ ಸರಿಪಡಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಪರಮೇಶ್ ನಾಯ್ಕ ಮಾತನಾಡಿ, ಸೊಸೈಟಿಯಲ್ಲಿ ಎಫ್‌ಡಿಆರ್ ಡಿ ಪಿಗ್ಮಿ ಹಾಗೂ ಬೇಟಿ, ಬೇಟಾ ಪಡಾವೋ ಘರ್ ಬಡಾವೋ ಈ ರೀತಿಯ ಹಲವು ಯೋಜನೆಗಳು ಇವೆ. ಈ ಯೋಜನೆಯಲ್ಲಿ ಆರ್ಥಿಕ ವಹಿವಾಟು ನಡೆಸಿ , ತಾಲೂಕಿನಲ್ಲಿ ಸಂಘವನ್ನು ಹೆಮ್ಮರವಾಗಿ ಬೆಳೆಸೋಣ ಸಂಘದಿಂದ ಮುಂದಿನ ದಿನಗಳಲ್ಲಿ ಷೇರುದಾರರಿಗೆ ರೂ.2 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು .

ಉಪನ್ಯಾಸಕ ಡಾ.ಎಚ್ ಓಂಕಾರ್ ನಾಯ್ಕ್ ಮಾತನಾಡಿ, ತಾಲೂಕಿನಲ್ಲಿ ಬಂಜಾರ ಜನಾಂಗ ಜನಸಂಖ್ಯೆಯಲ್ಲಿ ದೊಡ್ಡದಾಗಿದ್ದು, ಜನಾಂಗದ ನೌಕರರ ಸಹಾಯದಿಂದ ನೌಕರರ ಸಂಘ ಪ್ರಾರಂಭಿಸಿ ಆರು ವರ್ಷ ಕಳೆದಿದೆ.2023-24 ನೇ ಸಾಲಿನಲ್ಲಿ ಅಂದಾಜು ರೂ.80 ಲಕ್ಷ ಆರ್ಥಿಕ ವಹಿವಾಟು ನಡೆಸಿ ಜನಾಂಗದ ಗೌರವವನ್ನು ಹೆಚ್ಚಿಸಲಾಗಿದೆ.ನಮ್ಮಿಂದ ಸಂಘ,ಸಂಘದಿಂದ ನಾವು ಈ ಸಹಕಾರಿ ತತ್ವದಡಿ ನಾವೆಲ್ಲರೂ ಸಂಘದಲ್ಲಿ ಬಂಡವಾಳ ತೊಡಗಿಸಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಸಾಧನೆ ಮೂಲಕ ಸಂಘ ಗುರುತಿಸಿಕೊಳ್ಳುವಂತೆ ಆಗಲಿ.ಆಡಳಿತ ಮಂಡಳಿ ಸದಸ್ಯರು ನಿಷ್ಠೆ ಪ್ರಾಮಾಣಿಕತೆ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸಾಧನೆ ಮಾಡಲು ಸಾದ್ಯ ಎಂದು ತಿಳಿಸಿದರು.

ಉಪನ್ಯಾಸಕ ಡಾ.ವಸಂತ ನಾಯ್ಕ ಮಾತನಾಡಿ, ಶಿಕ್ಷಣ ಸರ್ವರ ಸ್ವತ್ತು ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಪರಿಶ್ರಮದಿಂದ ಅಭ್ಯಾಸ ಮಾಡಿ ಯುವಪೀಳಿಗೆ ಉನ್ನತ ಸ್ಥಾನವನ್ನು ಪಡೆಯಬೇಕು.ಜನಾಂಗದ ಅಭಿವೃದ್ಧಿ ಯುವಪೀಳಿಗೆಯಿಂದ ಸಾಧ್ಯಎಂದು ತಿಳಿಸಿದರು.

ಪ್ರಾಂಶುಪಾಲ ಠಾಕ್ರ್ಯಾನಾಯ್ಕ ಮಾತನಾಡಿ, ಸಾಧನೆಗೈದ ಜನಾಂಗದ ನೌಕರರನ್ನು ಗುರುತಿಸಿ ಗೌರವಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಹಿಮಾಲಯ ಪರ್ವತ ಶಿಖರ ಏರಿದ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡಾದ ವೀರ ವಿಕ್ರಂ, ದೇಶ ಸೇವೆಯೇ ಈಶ ಸೇವೆ ಎಂದು ದೇಶದ ಗಡಿರಕ್ಷಣೆ ಮೂಲಕ ನಿವೃತ್ತರಾದ ತಾಲೂಕಿನ ಎಳನೀರುಕೊಪ್ಪ ತಾಂಡಾದ ವೀರಯೋಧ ಮಂಜ್ಯಾನಾಯ್ಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾದ ಹುಣೇಂದ್ರ ನಾಯ್ಕ್ ರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಲೀಲಾಬಾಯಿ ಲಮಾಣಿ, ಡಾ.ರಾಜುನಾಯ್ಕ, ಎಸ್.ರಾಮ ಚಂದ್ರಪ್ಪ ಹಾಜರಿದ್ದರು. ಲಕ್ಷ್ಮಿಬಾಯಿ ಪ್ರಾರ್ಥಿಸಿ, ನಾಗರಾಜ್ ನಾಯ್ಕ್ ಸ್ವಾಗತಿಸಿ, ಸುರೇಶ್ ನಿರೂಪಿಸಿದರು.

Share this article