ಠೇವಣಿ ಹಣ ಮರಳಿಸಲು ಸತಾಯಿಸುತ್ತಿರುವ ಸೊಸೈಟಿ: ದೂರು

KannadaprabhaNewsNetwork | Published : Jul 2, 2025 11:50 PM
ಪೊಟೋ-ಪಟ್ಟಣದ ತಹಸೀಲ್ದಾರ ಅವರಿಗೆ ಕಿತ್ತೂರ ರಾಣಿ ಚೆನ್ನಮ್ಮ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹಣವನ್ನು ಮರಳಿ ಕೊಡಿಸುವಂತೆ ಗ್ರಾಹಕರು ಮನವಿ ಸಲ್ಲಿಸಿದರು.  | Kannada Prabha

ಲಕ್ಷ್ಮೇಶ್ವರ ಪಟ್ಟಣದಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಠೇವಣಿ ಹಣ ಕೊಡಿಸಬೇಕು ಎಂದು ನೂರಾರು ಗ್ರಾಹಕರು ಲಕ್ಷ್ಮೇಶ್ವರ ತಾಲೂಕಿನ ತಹಸೀಲ್ದಾರ್‌ ವಾಸುದೇವ ಸ್ವಾಮಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಠೇವಣಿ ಹಣ ಕೊಡಿಸಬೇಕು ಎಂದು ನೂರಾರು ಗ್ರಾಹಕರು ಲಕ್ಷ್ಮೇಶ್ವರ ತಾಲೂಕಿನ ತಹಸೀಲ್ದಾರ್‌ ವಾಸುದೇವ ಸ್ವಾಮಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಬ್ಯಾಂಕಿನ ಆಡಳಿತ ಮಂಡಳಿ ಗ್ರಾಹಕರಿಗೆ ಠೇವಣಿ ಇಟ್ಟಿರುವ ಹಣ ಮರಳಿಸಲು ಸತಾಯಿಸುತ್ತಿದೆ. ಆದ್ದರಿಂದ ತಾವು ಮಧ್ಯ ಪ್ರವೇಶಿಸಿ ಬಡವರ ಹಣ ಕೊಡಿಸಬೇಕು ಎಂದು ಕೋರಿದ್ದಾರೆ.

ಈ ವೇಳೆ ಶಿವಾನಂದ ಹಿರೇಮಠ ಮಾತನಾಡಿ, 8 ವರ್ಷಗಳ ಹಿಂದೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಆರಂಭಗೊಂಡಿದ್ದ ಬೈಲಹೊಂಗಲ ಮೂಲದ ಕಿತ್ತೂರ ರಾಣಿ ಚೆನ್ನಮ್ಮ ಸೌಹಾರ್ದ ಅರ್ಬನ್ ಸೊಸೈಟಿ ತಾಲೂಕಿನ ಸಾವಿರಾರು ಗ್ರಾಹಕರಿಂದ ಕೋಟ್ಯಂತರ ರು. ಠೇವಣಿಯಾಗಿ ಇಟ್ಟುಕೊಂಡಿತ್ತು. ಸಹಕಾರಿ ಸಂಘ ಗ್ರಾಹಕರಿಗೆ ಮೊದಲು ಉತ್ತಮವಾಗಿ ಸ್ಪಂದಿಸುವ ಕಾರ್ಯ ಮಾಡುತ್ತಿತ್ತು. ಇತ್ತೀಚೆಗೆ ಬ್ಯಾಂಕ್ ಗ್ರಾಹಕರು ಇಟ್ಟಿರುವ ಠೇವಣಿ ಹಣದ ಅವಧಿ ಮುಗಿದಿದ್ದರೂ ಠೇವಣಿ ಹಣ ಮರುಪಾವತಿಸುತ್ತಿಲ್ಲ. ಕಳೆದ 1-2 ವರ್ಷಗಳಿಂದ ಠೇವಣಿ ಮರು ಪಾವತಿಸುವಂತೆ ಬ್ಯಾಂಕಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಬ್ಯಾಂಕಿನ ಮ್ಯಾನೇಜರ್ ಸರಿಯಾಗಿ ಸ್ಪಂಧಿಸುತ್ತಿಲ್ಲ. ಈ ಕುರಿತು ಕೇಳಿದರೆ ನೀವು ಡಿಪಾಸಿಟ್ ಮಾಡಿರುವ ಹಣವನ್ನು ನಾವು ಬೈಲಹೊಂಗಲದ ಮುಖ್ಯ ಕಚೇರಿಗೆ ಕಳುಹಿಸಿ ಕೊಟ್ಟಿದ್ದೇವೆ. ಅವರು ಕೊಟ್ಟ ನಂತರ ನಿಮ್ಮ ಹಣ ಮರಳಿಸುತ್ತೇವೆ ಎಂದು ಹೇಳುತ್ತಾರೆ. ತುರ್ತು ಸಂದರ್ಭದಲ್ಲಿ ನಾವು ಠೇವಣಿ ಇಟ್ಟ ಹಣ ಸಿಗದಿದ್ದರೆ ಪರಿಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ವಿ.ಸಿ. ರಬಕವಿ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ಸೌಹಾರ್ದ ಸೊಸೈಟಿಯಲ್ಲಿ ಬಡವರು, ನಿವೃತ್ತ ನೌಕರರು ಹಾಗೂ ಕೂಲಿ ಕಾರ್ಮಿಕರು ಲಕ್ಷಾಂತರ ರು. ಠೇವಣಿ ಇಟ್ಟಿದ್ದಾರೆ. ಆದರೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಶಾಖೆ ಹೊಂದಿರುವ ಬ್ಯಾಂಕ್ ಮುಳುಗುವ ಹಂತಕ್ಕೆ ಬಂದು ನಿಂತಿದೆ. ಅದಕ್ಕಾಗಿ ನಾವು ಸರ್ಕಾರದ ಮೊರೆ ಹೋಗುವ ಕಾರ್ಯ ಮಾಡಬೇಕಿದೆ. ನಮಗೆ ನ್ಯಾಯ ಸಿಗುವ ವರೆಗೆ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ಸಚಿನ್‌ ಕರ್ಜಕಣ್ಣವರ, ಅಪ್ಪಣ್ಣ ಸೊರಟೂರ, ದಿನೇಶ ಗಾಂಧಿ, ಎಲ್.ಎಸ್. ವಸ್ತ್ರದ, ಮೃತ್ಯುಂಜಯ ಹಾವೇರಿಮಠ, ಮಹಾಂತೇಶ ಕರ್ಜಕಣ್ಣವರ, ಶ್ರೀಪಾಲ ಗಾಂಧಿ, ಈರಣ್ಣ ದವಡಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ಬೇಪಾರಿ, ಮಧು ಗಾಂಧಿ ಹಾಗೂ ಎಸ್.ಎನ್. ಮಲ್ಲಾಡದ ಇದ್ದರು.