ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ 500 ಸಿನೆಮಾದಲ್ಲಿ ನಟಿಸಿದ್ದ ಬ್ಯಾಂಕ್‌ ಜನಾರ್ದನ್‌ ಇನ್ನಿಲ್ಲ

KannadaprabhaNewsNetwork | Updated : Apr 15 2025, 07:02 AM IST

ಸಾರಾಂಶ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್‌ ಜನಾರ್ದನ್‌ (77) ಅವರು ಭಾನುವಾರ ತಡರಾತ್ರಿ 2.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್‌ ಜನಾರ್ದನ್‌ (77) ಅವರು ಭಾನುವಾರ ತಡರಾತ್ರಿ 2.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಬ್ಯಾಂಕ್ ಜನಾರ್ದನ್‌ ಅವರು ಹಲವಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಬ್ಯಾಂಕ್‌ ಜನಾರ್ದನ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ದರ್ಶನದ ನಂತರ ಸೋಮವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಿತು.

ಬ್ಯಾಂಕ್‌ ಜನಾರ್ದನ್‌ ಅವರು 2023ರ ಸೆಪ್ಟೆಂಬರ್‌ನಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಬಂದಿದ್ದರು. ಅಲ್ಲಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಲೇ ಇತ್ತು. ಹಾಗಾಗಿ 2023ರಲ್ಲಿ ಬಿಡುಗಡೆಯಾಗಿದ್ದ ‘ಉಂಡೆನಾಮ’ ಅವರ ಕೊನೆಯ ಸಿನಿಮಾವಾಗಿತ್ತು.

ಹೊಳಲ್ಕೆರೆ ಮೂಲದವರು:

1949ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆ​ರೆಯಲ್ಲಿ ಜನಿಸಿದ ಬ್ಯಾಂಕ್‌ ಜನಾರ್ದನ್‌ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರು. ಜೊತೆಗೆ ಮಲ್ಲಿಕಾರ್ಜುನ ಟೂರಿಂಗ್‍ ಟಾಕೀಸ್‍ ಎಂಬ ತಂಡದಲ್ಲಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದರು. ಅವರ ಅಭಿನಯದ ಯಶಸ್ವಿ ‘ಗೌಡ್ರ ಗದ್ಲ’ ನಾಟಕವನ್ನು ವೀಕ್ಷಿಸಿದ ಹಿರಿಯ ನಟ ಧೀರೇಂದ್ರ ಗೋಪಾಲ್‍ ಅವರು ಜನಾರ್ದನ್‍ ಅವರನ್ನು ಸಿನಿಮಾದಲ್ಲಿ ನಟಿಸುವುದಕ್ಕೆ ಪ್ರೋತ್ಸಾಹಿಸಿದ್ದರು.

ಅಲ್ಲಿಂದ ಚಿತ್ರರಂಗಕ್ಕೆ ಬಂದ ಬ್ಯಾಂಕ್‌ ಜನಾರ್ದನ್‌ ಹತ್ತಾರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದರು. ಅವರಿಗೆ ಕಾಶಿನಾಥ್‌ ಅವರ ‘ಅಜಗಜಾಂತರ’ ಸಿನಿಮಾ ಖ್ಯಾತಿ ತಂದುಕೊಟ್ಟಿತು. ನಂತರ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದಲ್ಲಿ ಅವರ ಪಾತ್ರ ಭಾರಿ ಜನಪ್ರಿಯವಾಗಿತ್ತು.

ಅವರು ಸಿನಿಮಾ, ಧಾರಾವಾಹಿಗಳು ಸೇರಿ ಒಟ್ಟು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಂದೆ, ಪೊಲೀಸ್‌, ಡಾಕ್ಟರ್‌, ಕಾಮಿಡಿಯನ್‌ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಮನರಂಜನೆ ಕೊಟ್ಟವರು.

ಚಿತ್ರರಂಗದಲ್ಲಿ ನಟನೆಯ ಅವಕಾಶಗಳು ಹೆಚ್ಚಾದ ಮೇಲೆ ಬ್ಯಾಂಕ್‌ ಉದ್ಯೋಗ ಬಿಟ್ಟು ಪೂರ್ಣ ಪ್ರಮಾಣದಲ್ಲಿ ನಟರಾದರು. ಆದರೆ, ಅವರ ಹೆಸರಿನ ಜತೆಗೆ ಬ್ಯಾಂಕ್‌ ಸೇರಿಕೊಂಡು ಕನ್ನಡ ಚಿತ್ರರಂಗದಲ್ಲಿ ಬ್ಯಾಂಕ್‌ ಜನಾರ್ದನ್‌ ಎಂದೇ ಜನಪ್ರಿಯರಾದರು.

80-90ರ ದಶಕದಲ್ಲಿ ತಮ್ಮದೇ ಆದ ನಟನೆ ಮೂಲಕ ಜನಪ್ರಿಯ ಪೋಷಕ ನಟರಾದ ಬ್ಯಾಂಕ್‌ ಜನಾರ್ದನ್‌ ಅವರಿಗೆ ‘ಊರಿಗೆ ಉಪಕಾರಿ’, ‘ಪಿತಾಮಹ’, ‘ಅಳಿಯ ಅಲ್ಲ ಮಗಳ ಗಂಡ’, ‘ಗೋವಿಂದ ಗೋಪಾಲ’, ‘ಹಾಸಿಗೆ ಇದ್ದಷ್ಟು ಕಾಲು ಚಾಚು’, ‘ಬುದ್ಧಿವಂತ’, ‘ಹೆತ್ತ ಕರುಳು’, ‘ಬಜಾರ್ ಭೀಮಾ’, ‘ಶ್‌..!’, ‘ಬೆಳ್ಳಿಯಪ್ಪ ಬಂಗಾರಪ್ಪ’, ‘ಗಣೇಶ ಸುಬ್ರಮಣ್ಯ’, ‘ಕೌರವ’ ಸೇರಿದಂತೆ ಹಲವು ಚಿತ್ರಗಳು ಹೆಸರು ತಂದುಕೊಟ್ಟಿವೆ.

ಸಿನಿಮಾಗಳ ಜತೆಗೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಬ್ಯಾಂಕ್‌ ಜನಾರ್ದನ್‌ ಅವರು ‘ಮಾಂಗಲ್ಯ’, ‘ರೋಬೋ ಫ್ಯಾಮಿಲಿ’, ‘ಪಾಪ ಪಾಂಡು’, ‘ಜೋಕಾಲಿ’ ಸೇರಿದಂತೆ ಹಲವು ಧಾರವಾಹಿಗಳಲ್ಲೂ ನಟಿಸಿದ್ದಾರೆ. ಹಿರಿಯ ಪೋಷಕ ನಟ ಬ್ಯಾಂಕ್‌ ಜನಾರ್ದನ್‌ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Share this article