ಬಂಕಾಪುರ ಹಿಂದೂ ಮಹಾಸಭಾ ಗಣಪತಿ ಅದ್ಧೂರಿ ಶೋಭಾಯಾತ್ರೆ

KannadaprabhaNewsNetwork |  
Published : Oct 13, 2025, 02:02 AM IST
12ಬಿಕೆಪಿ1, 1ಎ | Kannada Prabha

ಸಾರಾಂಶ

ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು ಒಂದೂವರೆ ತಿಂಗಳ ಬಳಿಕ ಇಲ್ಲಿಯ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಭಾನುವಾರ ಅದ್ಧೂರಿಯಾಗಿ ನಡೆಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಮೆರವಣಿಗೆಯಲ್ಲಿ ಸಾಗಿದರು.

ಬಂಕಾಪುರ: ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು ಒಂದೂವರೆ ತಿಂಗಳ ಬಳಿಕ ಇಲ್ಲಿಯ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಭಾನುವಾರ ಅದ್ಧೂರಿಯಾಗಿ ನಡೆಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಮೆರವಣಿಗೆಯಲ್ಲಿ ಸಾಗಿದರು.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾರಿ ಪೊಲೀಸ್ ಬಿಗಿಭದ್ರತೆಯಲ್ಲಿ ಶೋಭಾಯಾತ್ರೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶದಲ್ಲಿ ಭಾರಿ ಭದ್ರತೆ ಒದಗಿಸಲಾಗಿತ್ತು. ಡಿಜೆ ಅಬ್ಬರದ ನಡುವೆ ಹಿಂದೂಮಹಾಗಣಪತಿ ಶೋಭಾಯಾತ್ರೆಯ ಮೆರವಣಿಗೆ ಬಂಕಾಪುರ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು. ಶೋಭಾಯಾತ್ರೆಯ ಮೆರವಣಿಗೆಗೆ ಅರಳೆಲೆಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೆಂಡದಮಠದ ಸಿದ್ದೇಶ್ವರಸ್ವಾಮೀಜಿ, ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ಭರತ್ ಬೊಮ್ಮಾಯಿ ಚಾಲನೆ ನೀಡಿದರು.

ಮೆರವಣಿಗೆ ಆರಂಭವಾಗುತ್ತಿದ್ದಂತೆ ಯುವಕರು ಕುಣಿದು ಕುಪ್ಪಳಿಸಿದರು. ಡಿಜೆ ಹಾಡಿನೊಂದಿಗೆ ಹೆಜ್ಜೆ ಹಾಕಿದರು. ಗಣಪತಿ ಬಪ್ಪಾ ಮೋರಯಾ ಎಂಬ ಜಯಘೋಷ ಎಲ್ಲೆಡೆ ಅನುರಣಿಸಿತು. ಮೆರವಣಿಗೆ ಸಾಗುವ ಪ್ರಮುಖ ಬೀದಿಗಳಲ್ಲಿ ಹಸಿರು ತೋರಣಗಳನ್ನು ಕಟ್ಟಿ , ಮನೆಯ ಮುಂದೆ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು.ಪಟ್ಟಣದ ಸೆಂಟ್ರಲ್ ಮಾರ್ಕೆಟ್ ವರ್ತಕರ ಸಂಘದವರು ಗಣಪತಿಗೆ ಮಾಲೆ ಅರ್ಪಿಸಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಶೋಭಾಯಾತ್ರೆಗೆ ಆಗಮಿಸಿದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಿಹಿ ತಿಂಡಿ ಹಾಗೂ ಫಲಾವ ನೀಡಿದರು. ಗಣಪತಿ ಸಾಗುವ ಎಲ್ಲ ಬೀದಿಗಳಲ್ಲೂ ಅಲ್ಲಲ್ಲಿ ಆಯಾ ಓಣಿಯ ಪ್ರಮುಖರು ಜನರಿಗೆ ಪ್ರಸಾದ, ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿದ್ದರು.

ಯುವಕರು ಬಣ್ಣ ಹಾರಿಸಿ , ಪಟಾಕಿ ಸಿಡಿಸಿ ಗಣಪತಿ ಶೋಭಾಯಾತ್ರೆಗೆ ಮತ್ತಷ್ಟು ಮೆರಗು ತಂದರು.

ಗಣಪತಿ ಶೋಭಾಯಾತ್ರೆಗೆ ದಾವಣಗೆರೆ ವಿಭಾಗದ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡ ಆಗಮಿಸಿದ್ದರು. ಎಸ್ಪಿ ಯಶೋದಾ ವಂಟಗೋಡಿ ನೇತೃತ್ವದಲ್ಲಿ ಹೆಚ್ಚುವರಿ ಎಸ್ ಪಿ-2, ಡಿ.ವೈಎಸ್.ಪಿ-8, ಸಿಪಿಐ-22, ಪಿ.ಎಸ್.ಐ-57, ಎ.ಎಸ್.ಐ-92, ಹೆಚ್.ಸಿ ಹಾಗೂ ಪಿ.ಸಿ. -945, ಕೆ.ಎಸ್.ಆರ್.ಪಿ ಪಾರ್ಟಿ-6, ಡಿ.ಎ.ಆರ್ ಪಾರ್ಟಿ-7 ಹಾಗೂ ಕ್ಯೂ.ಆರ್.ಟಿ-4 ತಂಡಗಳು ಅಚ್ಚುಕಟ್ಟಾಗಿ ಕಾರ್ಯ ಭದ್ರತಾ ವ್ಯವಸ್ಥೆ ನಿರ್ವಹಿಸಿದವು.

ಶೋಭಾಯಾತ್ರೆಯಲ್ಲಿ ತಾಲೂಕು ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಜಿಲ್ಲಾಧ್ಯಕ್ಷ ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಗಂಗಾಧರ ಶೆಟ್ಟರ, ರವಿ ಬಳಿಗಾರ, ಬಸವರಾಜ ನಾರಾಯಣಪೂರ, ರವಿ ನರೇಗಲ್ಲ, ಕಿರಣ ಸಕ್ರಿ ಮುಂತಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!