ಹಾವೇರಿ: ದಾನಿಗಳ ಸಹಕಾರದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಪಿಎಸ್ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ಇಲ್ಲಿನ ವಿನಾಯಕ ನಗರದ ಬಿ ಬ್ಲಾಕ್‌ನ ಶ್ರೀ ಗಂಗಾಧರ ನಂದಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಭವನದ ಉದ್ಘಾಟನೆ ಹಾಗೂ ಕಾದಂಬರಿ ಪಿತಾಮಹ ಗಳಗನಾಥರ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀಮಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಹಾಗೂ ಬಡವರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಲು ಬಯಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನಕ್ಕೆ ಬದ್ಧವಾಗಿದೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿ ಕನ್ನಡ ಉಳಿವಿಗೆ ಕೂಗುವ ಪಾಲಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣೆಗೆ ಶ್ರೀ ಗಂಗಾಧರ ನಂದಿ ಅವರ ಹೆಸರಿನಡಿ ಆಡಳಿತ ಭವನ ಉದ್ಘಾಟಿಸಿರುವುದು ನನ್ನ ಪುಣ್ಯ. ಸಮ್ಮೇಳನ ಪಕ್ಷಾತೀತ, ಜಾತ್ಯತೀತ ಮಾದರಿಯಲ್ಲಿ ಯಶಸ್ವಿಯಾಗಿ ಜರುಗಿರುವುದು ನಮ್ಮೆಲ್ಲರ ಹೆಮ್ಮೆ. ಸಮ್ಮೇಳನದ ಬಳಿಕ ಉಳಿದ ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ನನ್ನ ಪಾಲಿನ ಕರ್ತವ್ಯವನ್ನು ಅಭಿಮಾನದಿಂದ ಮಾಡಿದ್ದೇನೆ. ಉಳಿದಿರುವ 70 ಲಕ್ಷ ರು.ಗಳ ಜೊತೆಗೆ ಸರ್ಕಾರದ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಿಸಬಹುದು ಎಂದರು.ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ಕಟ್ಟಡದ ನಿರ್ಮಾಣಕ್ಕೆ ಜಾಗೆಯ ಪಟ್ಟಾ ಕೊಟ್ಟಿದ್ದೆ. ಅಷ್ಟೇ ಅಲ್ಲದೇ 10 ಲಕ್ಷ ರು.ಗಳ ಶಾಸಕರ ಅನುದಾನ ಒದಗಿಸಿದ್ದೆ. ಎಲ್ಲರ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಕನ್ನಡ ಪರ ಚಟುವಟಿಕೆ ಜರುಗಲಿ ಎಂದರು.ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಂ.ಸಾಲಿ, ದಾನಿ ಡಾ.ರವಿ ನಂದಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿರುವ ದಾನಿಗಳನ್ನು ಹಾಗೂ ನಿಕಟಪೂರ್ವ ಕಸಾಪ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು. ಶಾಸಕ ಬಸವರಾಜ ಶಿವಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಮುಖಂಡರಾದ ಎಂ.ಎA.ಹಿರೇಮಠ, ಎಂ.ಎಂ. ಮೈದೂರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಅಪರ ಜಿಲ್ಲಾಧಿಕಾರಿ ನಾಗರಾಜ ಎಲ್, ಲಿಂಗರಾಜ ಅಂಗಡಿ, ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ಬಿ.ಎಂ.ಪಟೇಲಪಾಂಡು, ಬಿ.ಎನ್. ವಾಸರೆ, ವಾಮದೇವಪ್ಪ, ಬಿ.ಎನ್. ವಾಸರೆ, ಮಲ್ಲೇಶ ಕರಿಗಾರ, ಸಾಹಿತಿ ಗಂಗಾಧರ ನಂದಿ ಅವರ ಪತ್ನಿ ಸುಲೋಚನಾ ನಂದಿ, ಉದ್ಯಮಿ ಪವನ್ ದೇಸಾಯಿ, ಜಿಲ್ಲೆಯ ಎಂಟು ತಾಲೂಕಿನ ಕಸಾಪ ಅಧ್ಯಕ್ಷರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಗೂಳಪ್ಪ ಅರಳಿಕಟ್ಟಿ ವಂದಿಸಿದರು.ಕಾದಂಬರಿ ಪಿತಾಮಹ ಗಳಗನಾಥರ ಹೆಸರಿನಡಿ ನೂತನ ಸಾಹಿತ್ಯ ಭವನ ನಿರ್ಮಾಣಕ್ಕೆ 10 ಲಕ್ಷ ರು.ಗಳ ಅನುದಾನ ಒದಗಿಸುವೆ. ಗಳಗನಾಥ ಪ್ರತಿಷ್ಠಾನ ಕೈಗೊಳ್ಳುವ ಕಾರ್ಯಗಳಿಗೆ ಸಹಕಾರ ನೀಡುವೆ. ವರ್ಷಾಂತ್ಯದೊಳಗೆ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ಹಾವೇರಿ ಜಿಲ್ಲೆ ರಚನೆಗೊಂಡು 28 ವರ್ಷ ಗತಿಸಿದರೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡ ಇರಲಿಲ್ಲ. ಸರ್ಕಾರ ಹಾಗೂ ದಾನಿಗಳ ಸಹಕಾರದಿಂದ ಸ್ವತಂತ್ರ ಕಟ್ಟಡ ಉದ್ಘಾಟನೆಗೊಂಡಿದೆ. ನಮ್ಮ ಭಾವನೆಗಳಿಗೆ ಸ್ಪಂದಿಸಿದ ಪ್ರತಿಯೊಬ್ಬರನ್ನೂ ಸ್ಮರಿಸುವೆ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ
ಹೇಳಿದರು.