ಬೆಳೆ ಹಾನಿ ನಿರ್ಲಕ್ಷ್ಯ ಬೇಡ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

KannadaprabhaNewsNetwork |  
Published : Oct 13, 2025, 02:02 AM IST
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿ ಕೆ.ನಾಗೇಂದ್ರ ಪ್ರಸಾದ್ ಅವರು ಬೆಳೆಹಾನಿಯನ್ನು ನಿರ್ಲಕ್ಷ್ಯ ವಹಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  | Kannada Prabha

ಸಾರಾಂಶ

ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳಿಗೆ ನಿಯಮಿತವಾಗಿ ಅಣಕು ಪ್ರದರ್ಶನ ಮತ್ತು ತರಬೇತಿ ಹೊಂದಬೇಕು

ಬಳ್ಳಾರಿ: ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೂ ಆಗಿರುವ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಧಿಕಾರದ ಮಹತ್ವ ಅರಿತುಕೊಂಡಾಗ ಮಾತ್ರ ಅನಿರೀಕ್ಷಿತವಾಗಿ ಸಂಭವಿಸುವ ಎಂತಹ ವಿಪತ್ತನ್ನು ಎದುರಿಸಲು ಸಾಧ್ಯ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತು ಹಾಗೂ ಮಳೆ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಪತ್ತು ಎನ್ನುವುದು ಸಾರ್ವಜನಿಕ ಜೀವನಕ್ಕೆ ಅನಿರೀಕ್ಷಿತ ಮತ್ತು ಗಂಭೀರವಾದದ್ದು. ಹಾಗಾಗಿ ಪ್ರಾಧಿಕಾರದ ಸದಸ್ಯರಾಗಿರುವ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳಿಗೆ ನಿಯಮಿತವಾಗಿ ಅಣಕು ಪ್ರದರ್ಶನ ಮತ್ತು ತರಬೇತಿ ಹೊಂದಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗಂಭೀರ ಹಾನಿಯಾಗಿರುವುದು ಕಂಡುಬಂದಿಲ್ಲ. ಆದರೆ, ಜಿಲ್ಲೆಯಲ್ಲಿ ವಿವಿಧೆಡೆ ಭತ್ತದ ಬೆಳೆಗೆ ದುಂಡಾಣು ಮಚ್ಚೆ ರೋಗಕಂಡುಬಂದಿದ್ದು, ಈ ಕುರಿತು ರೈತರಿಗೆ ಸೂಕ್ತ ಕ್ರಮವಹಿಸಲು ನಿರ್ದೇಶನ ನೀಡಬೇಕು. ಒಂದು ಎಕರೆಯಾಗಲೀ ನೂರು ಎಕರೆಯಾಗಲೀ ಬೆಳೆ ಹಾನಿಯಾದಲ್ಲಿ ಯಾವುದನ್ನು ನಿರ್ಲ್ಯಕ್ಷಿಸುವಂತಿಲ್ಲ, ಗಣತಿ ಮಾಡಿ ವರದಿ ಮಾಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ರಾಜ್ಯ ಹೆದ್ದಾರಿ, ಗ್ರಾಮೀಣ ಭಾಗದ ರಸ್ತೆಗಳಲ್ಲಿ ತಗ್ಗು-ಗುಂಡಿ ಆಗಿದ್ದಲ್ಲಿ ಕೂಡಲೇ ಮುಚ್ಚಬೇಕು ಮತ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಲೋಕೋಪಯೋಗಿ, ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಳೆಹಾನಿ, ಸಾರ್ವಜನಿಕ ಕಟ್ಟಡ, ರಸ್ತೆ ಹಾನಿ, ಕುಡಿಯುವ ನೀರು ಮತ್ತು ಆರೋಗ್ಯ ಸೌಲಭ್ಯ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳ ಕುರಿತು ಪತ್ರಿಕೆಗಳಲ್ಲಿ ವರದಿಯಾದಲ್ಲಿ ಅಂತಹವುಗಳನ್ನು ಆದ್ಯತೆಯಾಗಿ ಪರಿಗಣನೆಗೆ ತೆಗೆದುಕೊಂಡು ಸರಿಪಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ ಶಾಲೆ ಮತ್ತು ಅಂಗನವಾಡಿ ಕೊಠಡಿಗಳು ಬೀಳುವ ಹಂತದಲ್ಲಿ ಅಥವಾ ದುರಸ್ತಿಯಿರುವ ಕಟ್ಟಡಗಳನ್ನು ಗುರುತಿಸಿ ಮಾಹಿತಿ ನೀಡಬೇಕು. ದುರಸ್ತಿ ವಿದ್ಯುತ್ ಕಂಬಗಳಿದ್ದಲ್ಲಿ ಗುರುತಿಸಬೇಕು ಎಂದು ಡಿಡಿಪಿಐ, ಜೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮತ್ತು ಅಗತ್ಯ ಔಷಧಿಗಳ ದಾಸ್ತಾನು ಇಟ್ಟುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಸ್‌ಡಿಆರ್‌ಎಫ್ ಅಡಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಅಗ್ನಿಶಾಮಕ ಅಧಿಕಾರಿಗಳು ನಿಯಮಿತವಾಗಿ ಪೂರ್ವ ತಯಾರಿ ಹೊಂದುವ ಮೂಲಕ ವಿಪತ್ತು ಸಂದರ್ಭದಲ್ಲಿ ಸಿದ್ಧರಿರಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ತೋಟಗಾರಿಕೆ, ಡಿಯುಡಿಸಿ, ಜೆಸ್ಕಾಂ, ಡಿಡಿಪಿಐ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ
ಅಹಂಕಾರ, ದರ್ಪ ತೋರದೇ ಎಲ್ಲ ಜನರನ್ನೂ ಗೌರವಿಸಿದ ಶಾಮನೂರು: ಅಣಬೇರು ರಾಜಣ್ಣ