ಭೈರಪ್ಪನವರ ಕೃತಿ ಹೊಳೆವ ನಕ್ಷತ್ರ ಇದ್ದಂತೆ: ಡಾ.ಶಶಿಧರ ನರೇಂದ್ರ

KannadaprabhaNewsNetwork |  
Published : Oct 13, 2025, 02:02 AM IST
ಬಳ್ಳಾರಿಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಜರುಗಿದ ಲೇಖಕ ಎಸ್.ಎಲ್.ಭೈರಪ್ಪನವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಡಾ.ಶಶಿಧರ ನರೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ಸಮಾಜದ ಸುಧಾರಣೆಗೂ ಸಾಹಿತ್ಯ ಎಂದೂ ಪೂರಕವಾಗದು ಎಂದೇ ಅವರು ಪ್ರತಿಪಾದಿಸುತ್ತಿದ್ದರು

ಬಳ್ಳಾರಿ: ನಿರ್ದಿಷ್ಟ ಸಿದ್ಧಾಂತವನ್ನು ಇಟ್ಟುಕೊಂಡು ಶುದ್ಧ ಸಾಹಿತ್ಯ ಬರೆಯಲು ಸಾಧ್ಯವಿಲ್ಲ ಎಂದು ಲೇಖಕ ಡಾ.ಎಸ್.ಎಲ್.ಭೈರಪ್ಪನವರು ಬಲವಾಗಿ ನಂಬಿದ್ದರು. ಸಮಾಜದ ಸುಧಾರಣೆಗೂ ಸಾಹಿತ್ಯ ಎಂದೂ ಪೂರಕವಾಗದು ಎಂದೇ ಅವರು ಪ್ರತಿಪಾದಿಸುತ್ತಿದ್ದರು ಎಂದು ಹಿರಿಯ ರಂಗಕರ್ಮಿ ಹಾಗೂ ಸಂಸ್ಕಾರ ಭಾರತಿಯ ಕರ್ನಾಟಕ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ತಿಳಿಸಿದರು.

ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ (ಬಿಪಿಎಸ್ಸಿ) ಶರಣ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಳ್ಳಾರಿ ಘಟಕ ಹಮ್ಮಿಕೊಂಡಿದ್ದ ಡಾ.ಎಸ್‌.ಎಲ್‌.ಭೈರಪ್ಪನವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಬರೆಯುವ ಕಾದಂಬರಿಗೆ ಅನುಗುಣವಾಗಿ ಪೂರಕವಾದ ಕಥಾ ರಚನೆ, ವಾಕ್ಯಗಳು ಬರುತ್ತವೆಯೋ ಹೊರತು, ಶುದ್ಧ ಸಾಹಿತಾತ್ಮಕವಾಗಿ ಅದು ನಿರ್ಮಾಣವಾಗುವುದಿಲ್ಲ. ಸಂಗೀತ ಸಹ ಇದಕ್ಕೆ ಹೊರತಲ್ಲ. ಸುಗಮ ಸಂಗೀತ, ಲಘು ಸಂಗೀತಗಳು ಸಂಗೀತಗಳಲ್ಲ. ಶಾಸ್ತ್ರೀಯ ಸಂಗೀತದ ಗಾಯನವೇ ಶುದ್ಧ ಸಂಗೀತ ಎಂದು ಭೈರಪ್ಪನವರು ಹೇಳುತ್ತಿದ್ದರು.

ಭೈರಪ್ಪನವರು ಶಾಸ್ತ್ರೀಯ ಸಂಗೀತವನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಗಂಗೂಬಾಯಿ ಹಾನಗಲ್ ಅವರ ಸಂಗೀತ ಕೇಳಿಯೇ ಸಂಗೀತ ಪ್ರಿಯರಾದರು. ಜೀವಮಾನದ ಕೊನೆಯವರೆಗೆ ಶಾಸ್ತ್ರೀಯ ಸಂಗೀತದ ಅಪ್ಪಟ ಪ್ರೇಮಿಗಳಾಗಿದ್ದರು. ಹೀಗಾಗಿಯೇ "ಮಂದ್ರ " ದಂತಹ ಕಾದಂಬರಿ ಬರೆಯಲು ಅವರಿಗೆ ಸಾಧ್ಯವಾಯಿತು. ಸಾಲ ಮಾಡಿಯಾದರೂ ಸರಿಯೇ ಜಗತ್ತಿನ ಅನೇಕ ಸಂಗೀತ ಕಚೇರಿಗಳಲ್ಲಿ ಭಾಗವಹಿಸುತ್ತಿದ್ದರು. ಧಾರವಾಡದಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳಿಗೆ ತಪ್ಪದೇ ಹೋಗುತ್ತಿದ್ದರು. ಹಿಂದೆಯೇ ಕುಳಿತು ಸಂಗೀತ ಕೇಳುತ್ತಿದ್ದರು. ಪಾಶ್ಚಾತ್ಯ ಸೇರಿದಂತೆ ಎಲ್ಲ ಬಗೆಯ ಸಂಗೀತವನ್ನು ಕೇಳುವ ಆಸಕ್ತಿ ಅವರಲ್ಲಿತ್ತು. ಆದರೆ, ಶಾಸ್ತ್ರೀಯ ಸಂಗೀತದ ಕಡೆ ಅವರಿಗೆ ಹೆಚ್ಚು ಒಲವಿತ್ತು. ಅನೇಕ ಸಂಗೀತದ ಕಾರ್ಯಕ್ರಮಗಳ ಉದ್ಘಾಟನೆಗೆ ಬಂದಾಗ ಅವರು ಮಾತನಾಡುತ್ತಿರಲಿಲ್ಲ. ಸಂಗೀತ ಕಛೇರಿಯಲ್ಲಿ ಮಾತು ಆಡಬಾರದು. ಸಂಗೀತವಷ್ಟೇ ನಡೆಯಬೇಕು ಎಂದು ಹೇಳುತ್ತಿದ್ದರು ಎಂದು ಶಶಿಧರ ನರೇಂದ್ರ ಅವರು ಭೈರಪ್ಪನವರ ಜೊತೆಗಿನ ಒಡನಾಟದ ವೇಳೆಯಲ್ಲಾದ ಸಂಭಾಷಣೆಯನ್ನು ವಿವರಿಸಿದರು.

ಎಸ್‌.ಎಲ್.ಭೈರಪ್ಪನವರು ಬರೆದಿರುವ 25 ಕಾದಂಬರಿಗಳು ಶುದ್ಧ ಹೊಳಪಿನ ನಕ್ಷತ್ರಗಳಂತಿವೆ. ಒಂದಕ್ಕಿಂತ ಒಂದು ಭಿನ್ನವಾದ ಕೃತಿಗಳಾಗಿವೆ. ಭೈರಪ್ಪನವರು ಕಾದಂಬರಿ ಬರೆದ ಬಳಿಕ ಕೂಡಲೇ ಪ್ರಕಟಿಸುತ್ತಿರಲಿಲ್ಲ. ನಾಲ್ಕೈದು ಬಾರಿ ತಿದ್ದುತ್ತಿದ್ದರು; ಪರಿಷ್ಕರಿಸುತ್ತಿದ್ದರು. ಬಳಿಕವಷ್ಟೇ ಅದು ಮುದ್ರಣಕ್ಕೆ ಹೋಗುತ್ತಿತ್ತು. ಒಮ್ಮೆ ಬರೆಯಲು ಕುಳಿತರೆ ಎಷ್ಟೇ ಸಾರಿ ಸುಸ್ತಾಗಿ ಬೀಳುತ್ತಿದ್ದರು. ಓದು ಮತ್ತು ಬರಹವನ್ನು ತಪ್ಪಸ್ಸಿನಂತೆ ಕೈಗೊಂಡರು. ಹೀಗಾಗಿಯೇ ಅವರು ಬರೆದ ಅನೇಕ ಕೃತಿಗಳು 50 ವರ್ಷಗಳ ಬಳಿಕವೂ ಒಂದೇ ಒಂದು ಅಕ್ಷರ ಬದಲಾಯಿಸಬೇಕು ಎಂದು ಅವರಿಗೆ ಎನಿಸಲಿಲ್ಲ.

ಭೈರಪ್ಪನವರು ಓದು, ಬರಹದ ಜೊತೆಗೆ ಅನೇಕ ಸಮಾಜಮುಖಿ ಸೇವೆಯನ್ನು ಕೈಗೊಂಡಿದ್ದರು. ತಮ್ಮೂರಿನ ಊರಿನ ಕೆರೆಯನ್ನು ಜೀಣೋದ್ಧಾರ ಮಾಡಿದರು. ಅನೇಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾದರು. ಸಾಹಿತ್ಯ ಕೃಷಿಯಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳಿಗೆ ವಿನಿಯೋಗಿಸಿದರು. ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದ ನಾನು, ಅವರ ಸಾಹಿತ್ಯ ಕೃಷಿಯ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಅವರ ಓದು, ಬರಹ, ಪ್ರವಾಸ, ಸಂಗೀತಾಸಕ್ತಿ ಹೀಗೆ ನಾನಾ ವಿಷಯಗಳ ಕುರಿತು ಚರ್ಚಿಸಿದ್ದೇನೆ. ಅವರ ಜೊತೆಗಿನ ಒಡನಾಟವೇ ನನ್ನ ಭಾಗ್ಯ ಎಂದೇ ಭಾವಿಸಿದ್ದೇನೆ ಎಂದು ಡಾ.ಶಶಿಧರ ನರೇಂದ್ರ ಸ್ಮರಿಸಿದರು.

ಚಂದ್ರಿಕಾ ಚಂದ್ರಕಾಂತ ಪ್ರಾಸ್ತಾವಿಕ ಮಾತನಾಡಿದರು. ಆರ್‌ವೈಎಂಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ತಿಮ್ಮನಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷೆ ಸತ್ಯವಾಣಿ ರವಿಕಿರಣ್, ಬಿಪಿಎಸ್ಸಿ ಶಾಲೆಯ ಮುಖ್ಯಸ್ಥ ಡಾ.ಎಸ್‌.ಜೆ.ವಿ.ಮಹಿಪಾಲ್ ಹಾಗೂ ಸತ್ಯವತಿ ಉಪಸ್ಥಿತರಿದ್ದರು. ಗುರುರಾಜ್ ಸಸಿಹಿತ್ಲು, ಲಕ್ಷ್ಮಿಪವನಕುಮಾರ, ಚಾರುಲತಾ ಹಾಗೂ ವಿಷ್ಣು ಹಡಪದ ಕಾರ್ಯಕ್ರಮ ನಿರ್ವಹಿಸಿದರು. ಭೈರಪ್ಪನವರ ಕೃತಿಗಳ ಮಾರಾಟವಿತ್ತು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ