ಶಿಂಷಾ ಎಡ ದಂಡೆಯ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯಾದ ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಎರಡು ತಿಂಗಳಲ್ಲಿ ಪೂರ್ಣಗೊಂಡು ಈ ಭಾಗದಲ್ಲಿ ದಶಕಗಳಿಂದ ತಲೆದೋರಿರುವ ನೀರಿನ ಹಾಹಾಕಾರವನ್ನು ಶಾಶ್ವತವಾಗಿ ಬಗೆಹರಿಸಲಾಗುವುದು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಬನ್ನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಈ ಭಾಗದ ಜನರಿಗೆ ನೀರಿನ ಹಾಹಾಕಾರ ಶಾಶ್ವತವಾಗಿ ಬಗೆಹರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಮದ್ದೂರು ತಾಲೂಕಿನ ಕೆ.ಬೆಳ್ಳೂರು ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಿಂಷಾ ಎಡ ದಂಡೆಯ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯಾದ ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಎರಡು ತಿಂಗಳಲ್ಲಿ ಪೂರ್ಣಗೊಂಡು ಈ ಭಾಗದಲ್ಲಿ ದಶಕಗಳಿಂದ ತಲೆದೋರಿರುವ ನೀರಿನ ಹಾಹಾಕಾರವನ್ನು ಶಾಶ್ವತವಾಗಿ ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಕೆರೆಗಳು ಸಾಕಷ್ಟು ಶಿಥಿಲಗೊಂಡಿವೆ. ನೀರನ್ನು ತುಂಬಿಸಿದರೆ ಬಹಳ ದಿನಗಳ ಕಾಲ ಉಳಿಯುತ್ತಿಲ್ಲ. ಹೀಗಾಗಿ ಕೆರೆಗಳ ಅಭಿವೃದ್ಧಿ, ತೂಬು ಮತ್ತು ಕೊಡಿಗಳ ನಿರ್ಮಾಣದ ಅಭಿವೃದ್ಧಿಗೆ ಈಗಾಗಲೇ ಸರ್ಕಾರಕ್ಕೆ 180 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ ಎಂದರು.
ತಾಲೂಕಿನ ರೈತರು ಅತಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಬೇರೆ ಕ್ಷೇತ್ರಗಳಿಗೆ ಹೊಲಿಸಿದರೆ ನಮ್ಮಲ್ಲಿ ನೀರಿನ ವ್ಯವಸ್ಥೆ ಕೂಡ ಇಲ್ಲ. ಆದರೂ ಸಹ ಅಲ್ಲಿನ ರೈತರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ನೀವು ಸಹ ಅಭಿವೃದ್ಧಿ ಹೊಂದಬೇಕೆಂದು ಕಿವಿಮಾತು ಹೇಳಿದರು.
ಕೆ.ಬೆಳ್ಳೂರು ಗ್ರಾಮವು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹೆಚ್ಚಿನ ಸವಲತ್ತುಗಳನ್ನು ನೀಡಿ ಸ್ವಚ್ಚ, ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಗ್ರಾಪಂ ಮಾಜಿ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ಶಿವಲಿಂಗಯ್ಯ, ರಮೇಶ್, ಟಿಎಚ್‌ಒ ಡಾ.ರವಿಶಂಕರ್, ಡಾ.ಸುನೀಲ್, ದೇವರಾಜ್, ಗ್ರಾಪಂ ಮಾಜಿ ಸದಸ್ಯ ಮಾದೇಶ್, ಕೆಡಿಪಿ ಸದಸ್ಯ ಸಿದ್ದರಾಜು, ರಾಜಣ್ಣ, ಜಯರಾಂ ಪಿಡಿಒ ಪ್ರಭಾಕರ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.