ವೈದ್ಯರು ನೀಡುವ ಚಿಕಿತ್ಸೆಯ ಪ್ರತಿಯೊಂದು ಆಯಾಮವೂ ರೋಗಿಯ ಜೀವ ಮತ್ತು ಆರೋಗ್ಯ ಕಾಪಾಡುವುದಾಗಿದೆ. ಮನುಕುಲದ ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದಾಗಿದೆ.
ಧಾರವಾಡ:
ವೈದ್ಯರು ನೀಡುವ ಚಿಕಿತ್ಸೆಯ ಪ್ರತಿಯೊಂದು ಆಯಾಮವೂ ರೋಗಿಯ ಜೀವ ಮತ್ತು ಆರೋಗ್ಯ ಕಾಪಾಡುವುದಾಗಿದೆ. ಮನುಕುಲದ ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದಾಗಿದೆ ಎಂದು ಹಿರಿಯ ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ ಮಹಾಬಲಶೆಟ್ಟಿ ಹೇಳಿದರು.ನಗರದ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗವು ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನ ಸ್ವೀಕರಿಸಿದ ಅವರು, ರೋಗಿಯೊಂದಿಗೆ ಮೃದು ಮಾತು, ಸಹಾನುಭೂತಿಯ ಜತೆಗೆ ರೋಗ ನಿವಾರಣೆಗೆ ಪೂರಕ ಸ್ಪಂದನೆಯಿಂದ ರೋಗ ನಿವಾರಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಐಎಂಎ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಸಿದ್ದಗಂಗಾ ಹಳ್ಳಿಕೇರಿ, ಸಮಾಜದ ಮೇಲೆ ಶಾಶ್ವತ ಪ್ರಭಾವ ಬೀರಿರುವ ವೈದ್ಯರ ಸೇವೆ ಮತ್ತು ಅವರ ಜೀವಮಾನದ ಸಾಧನೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಐಎಂಎ ಮಹಿಳಾ ವಿಭಾಗವು ನಿರಂತರ ಮಾಡುತ್ತಿದೆ. ಅತ್ಯಂತ ಸರಳ ವ್ಯಕ್ತಿತ್ವದಿಂದ ವೈದ್ಯಕೀಯ ಮೌಲ್ಯಗಳೊಂದಿಗೆ ಬದುಕಿರುವ ಹಿರಿಯ ಪ್ರಸೂತಿ ತಜ್ಞರಾದ ಡಾ. ನಿರ್ಮಲಾ ಮಹಾಬಲಶೆಟ್ಟಿ ಅವರು ಹೊಸ ತೆಲೆಮಾರಿನ ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದರು.ಐಎಂಎ ಮಾಜಿ ಅಧ್ಯಕ್ಷರಾದ ಡಾ. ವಾಣಿ ಇರಕಲ್, ಡಾ. ಕವಿತಾ ಮಂಕಣಿ ಹಾಗೂ ಡಾ. ಪಲ್ಲವಿ ದೇಶಪಾಂಡೆ, ಹಿರಿಯ ತಜ್ಞರಾದ ಡಾ. ವಿಜಯಾ ನಾಡಕರ್ಣಿ ಹಾಗೂ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿದರು. ಡಾ. ಕಾತ್ಯಾಯಿನಿ ಪಾಟೀಲ ನಿರೂಪಿಸಿದರು. ಡಾ. ಸ್ವಪ್ನಾ ಪಾಂಡುರಂಗಿ ವಂದಿಸಿದರು.