ಬನ್ನಂಜೆ ಗೋವಿಂದಾಚಾರ್ಯರದ್ದು ಮಾದರಿ ಜೀವನ

KannadaprabhaNewsNetwork |  
Published : Jul 06, 2026, 03:15 AM IST
ಸತ್ಯಕಾಮರ ಜನ್ಮಾರಾಧನೆ ಹಾಗೂ ಗೋವಿಂದ ದರ್ಶನ ಕಾರ್ಯಕ್ರಮವನ್ನುಬೆಂಗಳೂರಿನ ಶ್ರೀರಾಮಕೃಷ್ಣ ಮಠದ ಅಭಯಾನಂದ ಸ್ವಾಮೀಜಿಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಭಾರತವು ಜ್ಞಾನದ ನೆಲೆಯಾಗಿದ್ದು, ಆ ಪರಂಪರೆಯನ್ನು ಆಧುನಿಕ ಕಾಲದಲ್ಲಿ ಸಮರ್ಥವಾಗಿ ಜನಸಾಮಾನ್ಯರಿಗೆ ತಲುಪಿಸಿದ ಅಪರೂಪದ ಆಚಾರ್ಯರಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಪ್ರಮುಖರು ಎಂದು ಬೆಂಗಳೂರಿನ ಶ್ರೀರಾಮಕೃಷ್ಣ ಮಠದ ಅಭಯಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಭಾರತವು ಜ್ಞಾನದ ನೆಲೆಯಾಗಿದ್ದು, ಆ ಪರಂಪರೆಯನ್ನು ಆಧುನಿಕ ಕಾಲದಲ್ಲಿ ಸಮರ್ಥವಾಗಿ ಜನಸಾಮಾನ್ಯರಿಗೆ ತಲುಪಿಸಿದ ಅಪರೂಪದ ಆಚಾರ್ಯರಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಪ್ರಮುಖರು ಎಂದು ಬೆಂಗಳೂರಿನ ಶ್ರೀರಾಮಕೃಷ್ಣ ಮಠದ ಅಭಯಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಸತ್ಯಕಾಮರ ಜನ್ಮಾರಾಧನೆ ಹಾಗೂ ಹಿರಿಯ ವಿದ್ವಾಂಸ, ವೇದ-ಉಪನಿಷತ ವ್ಯಾಖ್ಯಾನಕಾರ ಮತ್ತು ಚಿಂತಕ ಬನ್ನಂಜೆ ಗೋವಿಂದಾಚಾರ್ಯರ 90ನೇ ವಿಶ್ವ ನಮನದ ಅಂಗವಾಗಿ ಗೋವಿಂದ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗೋವಿಂದಾಚಾರ್ಯರು ವೇದ, ಉಪನಿಷತ್ತು, ಪುರಾಣ ಮತ್ತು ಭಾರತೀಯ ತತ್ವಶಾಸ್ತ್ರವನ್ನು ಸರಳ ಕನ್ನಡದಲ್ಲಿ ವಿವರಿಸಿ ಜನಮನ ತಲುಪಿಸಿದ ಮಹಾನ ಚಿಂತಕರಾಗಿದ್ದರು. ಇರುವಿನ ಅರಿವು ಮುಖ್ಯ ಎಂಬ ಅವರ ಜೀವನದರ್ಶನ ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ. ಅವರ ಉಪನ್ಯಾಸಗಳು ಮತ್ತು ಗ್ರಂಥಗಳು ಸಾವಿರಾರು ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದು, ಅವರ ಸೇವೆ ಕನ್ನಡ ಸಾಹಿತ್ಯ ಹಾಗೂ ಭಾರತೀಯ ಸಂಸ್ಕೃತಿಗೆ ಅಮೂಲ್ಯ ಕೊಡುಗೆಯಾಗಿದೆ ಎಂದರು.

ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಕರ್ನಾಟಕದಲ್ಲಿ ಸಂಸ್ಕೃತ ಮತ್ತು ಕನ್ನಡ ಪರಂಪರೆಯನ್ನು ಸಮನ್ವಯಗೊಳಿಸಿದ ಅಪರೂಪದ ವಿದ್ವಾಂಸರಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಅಗ್ರಗಣ್ಯರು. ವೇದಸೂಕ್ತಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ಸರಳ ವ್ಯಾಖ್ಯಾನಗಳ ಮೂಲಕ ಕನ್ನಡದ ಶಾಸ್ತ್ರಭಂಡಾರವನ್ನು ಶ್ರೀಮಂತಗೊಳಿಸಿದರು. ಯೋಗ, ಜೈನ, ಬೌದ್ಧ ಸೇರಿದಂತೆ ವಿವಿಧ ತತ್ತ್ವಗಳ ಸಮನ್ವಯದ ಮೂಲಕ ಭಾರತೀಯ ಚಿಂತನೆಗೆ ಹೊಸ ಆಯಾಮ ನೀಡಿದರು ಎಂದರು.

ಬೆಂಗಳೂರಿನ ಮನು ಬಳಿಗಾರ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರ ಪುಸ್ತಕಗಳು ಮತ್ತು ಉಪನ್ಯಾಸಗಳು ತಮ್ಮ ಚಿಂತನೆಗೆ ಹೊಸ ದಿಕ್ಕು ನೀಡಿವೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಅವರ ಕೃತಿಗಳು ಪ್ರಮುಖ ಮಾರ್ಗದರ್ಶಿಗಳಾಗಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಾಗಿ ಪ್ರತಿಯೊಬ್ಬ ಕನ್ನಡಿಗ ಸದಾ ಕೃತಜ್ಞರಾಗಿರಬೇಕು ಎಂದು ಹೇಳಿದರು.

ವಿಕ್ರಮಾರ್ಜುನ ಹೆಗ್ಡೆ, ತಿಂಗಳೆ ಮಾತನಾಡಿ, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಊರಿನಲ್ಲಿ ನಡೆದ ಧರ್ಮ, ಸಾಹಿತ್ಯ ಮತ್ತು ಕಲೆಯ ಸಂಗಮ ಕಾರ್ಯಕ್ರಮಗಳಲ್ಲಿ ಬನ್ನಂಜೆ ಗೋವಿಂದಾಚಾರ್ಯರು ನಿರಂತರವಾಗಿ ಭಾಗವಹಿಸಿ ರಾಮಾಯಣ, ಮಹಾಭಾರತ ಹಾಗೂ ಉಪನಿಷತ್ತುಗಳ ಕುರಿತು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಉಪನ್ಯಾಸ ನೀಡುತ್ತಿದ್ದರು. ಹಳ್ಳಿಯೊಂದಿಗೆ ಬೆಸೆದುಕೊಂಡಿದ್ದ ಅವರ ಆತ್ಮೀಯತೆ ಇಂದಿಗೂ ಅವಿಸ್ಮರಣೀಯವಾಗಿದೆ ಎಂದು ಸ್ಮರಿಸಿದರು.

ಇದಕ್ಕೂ ಮೊದಲು ಸತ್ಯಕಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಕಾಸರಗೋಡಿನ ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ಉಡುಪಿಯ ನಿತ್ಯಾನಂದ ಪಡ್ರೆ, ಮೈಸೂರಿನ ಗ.ನಾ. ಭಟ್ಟರು, ವಿಜಯಸಿಂಹ ಆಚಾರ್ಯರು, ರಮೇಶ ವಾಸುದೇವ, ಅಮೆರಿಕದ ಶ್ರೀವತ್ಸ ಬಲ್ಲಾಳ್‌, ರೋಹಿತ ಚಕ್ರ, ಸಾಹಿತಿ ವೀಣಾ ಬನ್ನಂಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸಂಪರ್ಕವಿಲ್ಲದ ಗ್ರಾಮ ಚಾವಡಿ!
ಮಾರುತಿ ಮಂದಿರ ಭಾಗಶಃ ಜಲಾವೃತ