ಬ್ಯಾನರ್ ಗಲಭೆ; ಮುಂದುವರಿದ ಜಾಲತಾಣದ ಸಮರ

KannadaprabhaNewsNetwork |  
Published : Jan 23, 2026, 02:15 AM IST
ಸ | Kannada Prabha

ಸಾರಾಂಶ

ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳ ವಿಡಿಯೋಗಳನ್ನು ಪಕ್ಷದ ಕಾರ್ಯಕರ್ತರು ಹರಿಬಿಡುವ ಮೂಲಕ ತಮ್ಮ ನಾಯಕರ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ರಾಜ್ಯದ ಗಮನ ಸೆಳೆದಿದ್ದ ಬಳ್ಳಾರಿ ಬ್ಯಾನರ್ ಗಲಭೆ ಸದ್ಯಕ್ಕೆ ಶಮನಗೊಂಡಿದೆ. ಆದರೆ, ಆಡಳಿತಾರೂಢ ಪಕ್ಷ ಹಾಗೂ ಪ್ರತಿಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ನಡುವಿನ ಸಾಮಾಜಿಕ ಜಾಲತಾಣದ ಸಮರ ಮಾತ್ರ ಇನ್ನು ಶಮನಗೊಂಡಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳ ವಿಡಿಯೋಗಳನ್ನು ಪಕ್ಷದ ಕಾರ್ಯಕರ್ತರು ಹರಿಬಿಡುವ ಮೂಲಕ ತಮ್ಮ ನಾಯಕರ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದು, ಪಕ್ಷಗಳ ಜಿಲ್ಲಾ ಪ್ರಮುಖರು ಬ್ಯಾನರ್ ಗಲಭೆ ಮುನ್ನ ಹಾಗೂ ನಂತರದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ಕೈ-ಕಮಲ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿರುವ ಸಾರ್ವಜನಿಕರು ಎರಡು ಪಕ್ಷಗಳ ನಾಯಕರ ನಡೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

"ರಾಜಕೀಯ ಪಕ್ಷಗಳು ಹಾಗೂ ನಾಯಕರು ಜನ ಉದ್ಧಾರಕ್ಕಾಗಿ ಗುದ್ದಾಟ ಮಾಡುತ್ತಿಲ್ಲ. ತಮ್ಮ ಅಧಿಕಾರ, ಅಂತಸ್ತು ಹೆಚ್ಚಿಸಿಕೊಳ್ಳಲು ಬಡಪಾಯಿಗಳನ್ನು ಬಲಿ ಕೊಡುತ್ತಿದ್ದಾರೆ. ಜನರು ಎಚ್ಚೆತ್ತುಕೊಳ್ಳದೇ ಹೋದರೆ ರಾಜಕೀಯ ನಾಯಕರ ಮೇಲಾಟಗಳಿಗೆ ಅಮಾಯಕರು ಜೀವ ಕಳೆದುಕೊಳ್ಳಬೇಕಾಗುತ್ತದೆ " ಎಂಬ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದಾರೆ.ರೆಡ್ಡಿ-ರಾಮುಲು ಮುನಿಸು-ಶಮನವಾಯಿತೇ?:

ಪರಸ್ಪರ ಮುನಿಸಿಕೊಂಡು ದೂರವೇ ಉಳಿದಿದ್ದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಬ್ಯಾನರ್ ಗಲಾಟೆ ಬಳಿಕ ಒಂದಾದರು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸುತ್ತಿರುವ ನಡುವೆ ಈ ಹಿಂದೆ ಶ್ರೀರಾಮುಲು ವಿರುದ್ಧ ಜನಾರ್ದನ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಹಿಗ್ಗಾಮುಗ್ಗಾ ಬೈಯ್ದಾಡಿಕೊಂಡಿದ್ದನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಆಪ್ತಮಿತ್ರರು ದಿಢೀರ್ ಒಂದಾಗಿದ್ದು ಹೇಗೆ? ಯಾವ ದೈವೀಶಕ್ತಿ ಈ ಇಬ್ಬರನ್ನು ಮತ್ತೆ ಜೊತೆಗೂಡಿಸಿತು ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಕೌಂಟರ್ ಕೊಡುತ್ತಿರುವ ಬಿಜೆಪಿಯವರು "ಬ್ಯಾನರ್ ಗಲಭೆ ಸೃಷ್ಟಿಸಿ ನಮ್ಮ ನಾಯಕರನ್ನು ನೀವೇ ಒಂದು ಮಾಡಿ, ಪುಣ್ಯಕಟ್ಟಿಕೊಂಡಿದ್ದೀರಿ. ಇಬ್ಬರು ನಾಯಕರ ಮುನಿಸಿನಿಂದ ಕಂಗಾಲಾಗಿದ್ದ ನಮಗೂ ಹುಮ್ಮಸ್ಸು ತಂದಿರಿ.ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಮುನ್ನ ಜಿಲ್ಲೆಯ ಎರಡು ಬಿಜೆಪಿ ಶಕ್ತಿಯನ್ನು ಒಂದುಗೂಡಿಸಿದ ನಿಮಗೆ ಅನಂತ ನಮನ. ನಿಮ್ಮ ಸಹಾಯವನ್ನು ನಾವೆಂದೂ ಮರೆಯುವುದಿಲ್ಲ ಎಂದು ಕಮಲ ಕಾರ್ಯಕರ್ತರು ಟಾಂಗ್ ಕೊಡುತ್ತಿದ್ದಾರೆ. ಏಟಿಗೆ ಎದುರೇಟು ಎಂಬಂತೆ ಎರಡು ಪಕ್ಷದ ಕಾರ್ಯಕರ್ತರು ನಿತ್ಯ ಒಂದಿಲ್ಲೊಂದು ವೀಡಿಯೋಗಳನ್ನು ಹರಿಬಿಟ್ಟು ಚರ್ಚೆ ಹುಟ್ಟು ಹಾಕುತ್ತಿದ್ದಾರೆ.

ಗಲಭೆ ಪ್ರಕರಣ ತನಿಖೆಯ ಕುತೂಹಲ:ಒಂದೆಡೆ ಬ್ಯಾನರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದ್ದಂತೆಯೇ ಬ್ಯಾನರ್ ಗಲಾಟೆ ಎಬ್ಬಿಸಿದವರಿಗೆ ಶಿಕ್ಷೆಯಾಗುತ್ತಾ? ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬಂದಿವೆ. ಆಡಳಿತಾರೂಢ ಸರ್ಕಾರ ಕಾಂಗ್ರೆಸ್ ಇರುವುದರಿಂದ ಸಿಐಡಿ ತನಿಖೆಯಿಂದ ನ್ಯಾಯ ನಿರೀಕ್ಷಿಸಲು ಅಸಾಧ್ಯ ಎಂಬ ವಾದ ಒಂದೆಡೆಯಾದರೆ, ತನಿಖಾ ಸಂಸ್ಥೆಗಳ ಮೇಲೆ ವಿಶ್ವಾಸ ಕಳೆದುಕೊಂಡರೆ ಹೇಗೆ? ತನಿಖೆಯ ಪೂರ್ಣಗೊಳ್ಳುವ ಮುನ್ನವೇ ಫಲಿತಾಂಶ ಪ್ರಕಟಿಸುವುದು ಎಷ್ಟು ಸರಿ? ಎಂಬ ಮಾತುಗಳು ಸಹ ಕೇಳಿ ಬಂದಿವೆ. ಬ್ಯಾನರ್ ಗಲಭೆ ಪ್ರಕರಣ ಸದ್ಯ ಬಳ್ಳಾರಿಯಲ್ಲಿ ಜೀವಂತವಾಗಿರಲು ಎರಡು ಪಕ್ಷಗಳ ಕಾರ್ಯಕರ್ತರೇ ಹೆಚ್ಚು ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನವರಿ 1ರಂದು ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್ ಗಲಾಟೆ ಸಂಭವಿಸಿತ್ತು. ಗಲಭೆ ವೇಳೆ ಕಲ್ಲು, ಖಾರದಪುಡಿ ತೂರಾಟ ನಡೆದು, ಖಾಸಗಿ ಗನ್‌ಮ್ಯಾನ್‌ಗಳ ಗುಂಡು ಹಾರಿಸಿದ್ದರಿಂದ ಯುವಕನ ಸಾವು ಸಹ ಸಂಭವಿಸಿತು. ಈ ಗಲಭೆ ಸೃಷ್ಟಿಸಿದವರು ಯಾರು? ಯಾರಿಗೆ ಶಿಕ್ಷೆಯಾಗುತ್ತದೆ? ಎಂಬುದಷ್ಟೇ ಸದ್ಯಕ್ಕಿರುವ ಕುತೂಹಲವಾಗಿದ್ದು ಸಿಐಡಿ ತನಿಖೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ