ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯ: ರಾಜ್ಯಮಟ್ಟ ವರ್ಣೋತ್ಸವ

KannadaprabhaNewsNetwork | Published : Mar 26, 2025 1:33 AM

ಸಾರಾಂಶ

ಕಾಪು ತಾಲೂಕು ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 2 ದಿನಗಳ ‘ವರ್ಣೋತ್ಸವ ೨ಕೆ೨೫’ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾಪು

ಪ್ರತಿಯೊಬ್ಬರಲ್ಲೂ ಇರುವ ಪ್ರತಿಭೆಗಳು ಗುರುತಿಸುವಂತಾಗಬೇಕು. ಸ್ಫರ್ಧೆಗಳು ಜೀವನದ ಒಂದು ಭಾಗವಾಗಿದ್ದು, ಅದರಿಂದ ಪ್ರತಿಭೆಗಳ ಅನಾವರಣಲಾಗಬೇಕು ಎಂದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು, ಉಡುಪಿ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 2 ದಿನಗಳ ‘ವರ್ಣೋತ್ಸವ ೨ಕೆ೨೫’ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ವಿಜೇತರಿಗೆ ಟ್ರೋಫಿ ವಿತರಿಸಿ ಆಶೀರ್ವಚನ ನೀಡಿದರು.

ಇಲ್ಲಿ ಪಡೆದ ಬಹುಮಾನಗಳು ಸಾಧನೆಯ ಒಂದು ಭಾಗ ಮಾತ್ರ. ಜೀವನದ ಓಟದಲ್ಲಿ ನಮ್ಮ ಸಂಸ್ಕೃತಿ, ಮೌಲ್ಯ, ಪರಂಪರೆಯನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಮಿರಾಫ್ರ ಟೆಕ್ನಾಲಜೀಸ್‌ನ ವಿನೋದ್ ಜಾನ್ ಮಾತನಾಡಿ ಪ್ರತಿಫಲಾಪೇಕ್ಷೆಯಿಲ್ಲದೆ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಅಂದುಕೊಂಡ ಗುರಿಸಾಧಿಸಲು ಸಾಧ್ಯ ಎಂದರು.

ಯುವ ಸಿನಿಮಾನಟ ಪೃಥ್ವಿ ಅಂಬರ್, ಸೋದೆ ವಾದಿರಾಜ ಮಠದ ಉಪಾಧ್ಯಕ್ಷ ಪಿ. ಶ್ರೀನಿವಾಸ ತಂತ್ರಿ, ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ. ಗಣೇಶ್ ಐತಾಳ್, ಕಾರ್ಯಕ್ರಮಗಳ ಸಂಯೋಜಕರಾದ ಡಾ. ರೆನಿಟಾ ಶರೋನ್ ಮೋನಿಸ್, ವರುಣ್ ಕೆ. ವೇದಿಕೆಯಲ್ಲಿದ್ದರು.

ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜು ಇವರು ವರ್ಣೋತ್ಸವ ೨ಕೆ೨೫ ಇದರ ಚಾಂಪಿಯನ್‌ಶಿಪ್ ಬಹುಮಾನ ಪಡೆದುಕೊಂಡರೆ ಎಸ್ ಡಿ ಎಮ್ ಪಿಜಿ ಸೆಂಟರ್ ದ್ವಿತೀಯ ಸ್ಥಾನದೊಂದಿಗೆ ರನ್ನರ್ಸ್‌ ಅಪ್ ಬಹುಮಾನ ಪಡೆದುಕೊಂಡಿತು.

ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಅರುಣ್ ಉಪಾಧ್ಯಾಯ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಮಯ್ಯ ರಿಯಾಝ್, ವೈಭವ್ ನಿರೂಪಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ದೀಪಿಕಾ ಬಿ ವಿ ವಂದಿಸಿದರು.

Share this article