ಜಮೀನಿನಲ್ಲಿ ಅಳವಡಿಸಿದ ವಿದ್ಯುತ್ ಕಂಬಗಳಿಗೆ ಪರಿಹಾರ ಆಗ್ರಹಿಸಿ ಅನಿರ್ದಿಷ್ಟ ಧರಣಿ

KannadaprabhaNewsNetwork | Published : Mar 26, 2025 1:33 AM

ಸಾರಾಂಶ

ಗಜೇಂದ್ರಗಡ ತಾಲೂಕಿನ ಅಮರಗಟ್ಟಿ, ಲಕ್ಕಲಕಟ್ಟಿ, ಗುಳಗುಳಿ ಹಾಗೂ ಬೇವಿನಕಟ್ಟಿ ಗ್ರಾಮಗಳ ರೈತರ ಜಮೀನಿನಲ್ಲಿ ಖಾಸಗಿ ಕಂಪನಿಯವರು ಅಳವಡಿಸಿದ ವಿದ್ಯುತ್ ಕಂಬ ಹಾಗೂ ಎಳೆದ ತಂತಿಗಳಿಗೆ ರೈತರಿಗೆ ನೀಡಬೇಕಾದ ಪರಿಹಾರ ಹಣವನ್ನು ನೀಡಿಲ್ಲ ಎಂದು ಆರೋಪಿಸಿ ಗುಳಗುಳಿ ಗ್ರಾಮದ ಗ್ರಿಡ್ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಗಜೇಂದ್ರಗಡ: ತಾಲೂಕಿನ ಅಮರಗಟ್ಟಿ, ಲಕ್ಕಲಕಟ್ಟಿ, ಗುಳಗುಳಿ ಹಾಗೂ ಬೇವಿನಕಟ್ಟಿ ಗ್ರಾಮಗಳ ರೈತರ ಜಮೀನಿನಲ್ಲಿ ಖಾಸಗಿ ಕಂಪನಿಯವರು ಅಳವಡಿಸಿದ ವಿದ್ಯುತ್ ಕಂಬ ಹಾಗೂ ಎಳೆದ ತಂತಿಗಳಿಗೆ ರೈತರಿಗೆ ನೀಡಬೇಕಾದ ಪರಿಹಾರ ಹಣವನ್ನು ನೀಡಿಲ್ಲ ಎಂದು ಆರೋಪಿಸಿ ಗುಳಗುಳಿ ಗ್ರಾಮದ ಗ್ರಿಡ್ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ತಾಲೂಕಿನ ಗುಳಗುಳಿ, ಅಮರಗಟ್ಟಿ, ಲಕ್ಕಲಕಟ್ಟಿ ಹಾಗೂ ಬೇವಿನಕಟ್ಟಿ ಗ್ರಾಮಗಳ ವ್ಯಾಪ್ತಿಯ ೫೦ಕ್ಕೂ ಅಧಿಕ ರೈತರ ಜಮೀನಿನಲ್ಲಿ ಖಾಸಗಿ ವಿದ್ಯುತ್ ಕಂಬಗಳ ಮತ್ತು ಎಳೆದ ವಿದ್ಯುತ್ ತಂತಿ ಹಾಕಲು ರೈತರಿಂದ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಪರವಾನಿಗೆ ಪಡೆದಿಲ್ಲ ಎಂದು ದೂರಿದ ರೈತರು, ಜಮೀನಿನಲ್ಲಿ ವಿದ್ಯುತ್ ಕಂಬ ಹಾಗೂ ತಂತಿ ಎಳೆಯುವಾಗ ಪ್ರಶ್ನಿಸಿದ ರೈತರಿಗೆ ಖಾಸಗಿ ಕಂಪನಿಯವರು ಕೆಲ ರೈತರಿಗೆ ಮೂಗಿಗೆ ತುಪ್ಪ ಸವರುವಂತೆ ಕವಡೆಕಾಸಿನ ಪರಿಹಾರ ನೀಡಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನುಳಿದ ಪರಿಹಾರದ ಹಣವನ್ನು ನೀಡುವದಾಗಿ ಭರವಸೆ ನೀಡಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ ಕಾಮಗಾರಿ ಮುಗಿದು ವರ್ಷ ಕಳೆದರೂ ಸಹ ಕಂಪನಿ ಅವರು ರೈತರಿಗೆ ಸೂಕ್ತ ಪರಿಹಾರದ ಹಣ ನೀಡಲು ಮುಂದಾಗುತ್ತಿಲ್ಲ. ಒಬ್ಬ ರೈತರಿಗೆ ರು. ೫-೬ ಲಕ್ಷದ ವರೆಗೆ ಪರಿಹಾರ ನೀಡಬೇಕು. ಆದರೆ ಬೆರಳಣಿಕೆ ರೈತರಿಗೆ ರು.೨೦ ಸಾವಿರದಷ್ಟು ಹಣವನ್ನು ನೀಡಿದ್ದು ಬಿಟ್ಟರೆ ಇನ್ನುಳಿದ ಬಹುಪಾಲು ರೈತರಿಗೆ ಪರಿಹಾರದ ಹಣ ಬರಬೇಕಿದೆ. ಹೀಗಾಗಿ ರೈತರಿಗೆ ನೀಡಬೇಕಾದ ಪರಿಹಾರದ ಹಣವನ್ನು ನೀಡಿ ಎಂದು ಕಂಪನಿ ಅವರಿಗೆ ಪ್ರಶ್ನಿಸಿದರೆ ಕಂಪನಿ ಅವರು ಹಣ ನೀಡುವ ಬದಲು ರೈತರಿಗೆ ಕೋರ್ಟಿಗೆ ಹೋಗಿ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು. ಈ ಹಿಂದೆ ತಾಲೂಕಿನ ರೈತರಿಗೆ ಖಾಸಗಿ ಕಂಪನಿ ಅವರಿಂದ ರೈತರಿಗೆ ಬರಬೇಕಾದ ಪರಿಹಾರದ ಹಣ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿಕೊಂಡಾಗ ಅಂದಿನ ಜಿಲ್ಲಾಧಿಕಾರಿಗಳು ಗೋವಿಂದ ರೆಡ್ಡಿ ಅವರು ಸಕಾರತ್ಮಾಕವಾಗಿ ಸ್ಪಂದಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ೬ ತಿಂಗಳು ಗತಿಸಿದರೂ ಸಹ ನಮಗೆ ಪರಿಹಾರ ಸಿಕಿಲ್ಲ. ನಮಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರೂ ಸಹ ತಾಲೂಕಿನ ಶಾಸಕರಾಗಲಿ, ಸಚಿವರಾಗಲಿ ಅಥವಾ ಅಧಿಕಾರಿಗಳು ನಮ್ಮ ಅಹವಾಲು ಆಲಿಸಲು ಪ್ರತಿಭಟನಾ ಸ್ಥಳಕ್ಕೆ ಬಂದಿಲ್ಲ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ. ಈ ವೇಳೆ ಶಿವಯ್ಯ ಎಂ. ಹಿರೇಮಠ, ಬಸಪ್ಪ ಸಂಗನಾಳ, ಧರ್ಮಣ್ಣ ಬೆನಕನವಾರಿ, ವಿರೂಪಾಕ್ಷಪ್ಪ ವೆನಕನವಾರಿ, ವೀರಭದ್ರಪ್ಪ ರೊಟ್ಟಿ, ಚಂದ್ರಕಾಂತ ಜವೂರ, ಶೇಖಪ್ಪ ಕುರಿ, ಲಕ್ಷ್ಮವ್ವ ಹಡಪದ, ಬಸವ್ವ ಸಂಗನಾಳ, ಕಳಕಪ್ಪ ಅರಮನಿ, ಹೊನಕೇರಪ್ಪ ಕೊಪ್ಪದ, ದ್ರಾಕ್ಷಾಯಿಣಿ ಪುರಾಣಿಕಮಠ, ಸೋಮಪ್ಪ ಬೆನಕನವಾರಿ, ಜಗದೀಶಪ್ಪ ಹೊಸಳ್ಳಿ, ಗೌಡಪ್ಪ ಮರಿಗೌಡರ, ಶರಣಯ್ಯ ಪುರಾಣಿಕಮಠ, ಬಸವರಾಜ ರೊಟ್ಟಿ, ಬಸವರಾಜ ಬಾಬಜಿ ಸೇರಿ ೫೦ಕ್ಕೂ ಅಧಿಕ ರೈತರ ಪ್ರತಿಭಟನೆಯಲ್ಲಿ ಇದ್ದರು. "ನಮ್ಮ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ಮತ್ತು ಎಳೆದ ವಿದ್ಯುತ್ ತಂತಿಗಳಿಗೆ ನಮ್ಮಿಂದ ಯಾವುದೇ ಒಪ್ಪಿಗೆ ಪಡೆದಿಲ್ಲ. ಆದರೆ ನಮಗೆ ಬರಬೇಕಾದ ಪರಿಹಾರದ ಹಣ ನೀಡಿ ಎಂದು ಪ್ರಶ್ನಿಸಿದರೆ ಕೋರ್ಟಿಗೆ ಹೋಗಿ ಎನ್ನುತ್ತಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಡೆಸುತ್ತೇವೆ ಶಿವಯ್ಯ ಎಂ. ಹಿರೇಮಠ, ಬಸಪ್ಪ ಸಂಗನಾಳ ಹೇಳಿದರು.

Share this article