ಕಾಂಗ್ರೆಸ್‌ನಿಂದ ಯಾವತ್ತೂ ಸಂವಿಧಾನಬದ್ಧ ಕೆಲಸ: ಬೋಸರಾಜು

KannadaprabhaNewsNetwork | Published : Mar 26, 2025 1:33 AM

ಸಾರಾಂಶ

ಕಾಂಗ್ರೆಸ್‌ ಯಾವತ್ತೂ ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಂಗ್ರೆಸ್ ಯಾವತ್ತೂ ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ತಿರುಚಿ ಈ ರೀತಿ ಮಾಡಲಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಮಡಿಕೇರಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದರು. ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎನ್ನುವ ಬಿಜೆಪಿಯವರ ಆರೋಪವನ್ನು ಅಲ್ಲೆಗಳೆದ ಬೋಸರಾಜು, ಬಿಜೆಪಿಯವರ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಾಂಗ್ರೆಸ್, ಎಐಸಿಸಿ ಕೂಡ ಅದನ್ನೇ ಪ್ರತಿಪಾದಿಸುತ್ತದೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಹಿರಿಯ ನಾಯಕರು. ಹೀಗಿರುವಾಗ ಸಂವಿಧಾನ ವಿರುದ್ಧವಾಗಿ ಮಾತನಾಡಲು ಸಾಧ್ಯವೇ ಇಲ್ಲ ಎಂದು ಸಮರ್ಥಿಸಿಕೊಂಡರು.

ಹನಿ ಟ್ರ್ಯಾಪ್ ವಿಷಯ ಸಿಎಂ ಸಿದ್ದರಾಮಯ್ಯ ಅವರಿಂದಲೇ ಬಯಲಿಗೆ ಬಂದಿದೆ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಬೋಸರಾಜು, ನಾನು ಎರಡು ಸದನಗಳಲ್ಲಿ ಭಾಗವಹಿಸುತ್ತಿದ್ದೆ. ಆ ವಿಷಯ ಪ್ರಸ್ತಾಪಿಸಿದ್ದು ಸಚಿವ ರಾಜಣ್ಣ. ಅದು ದಾಖಲೆಯಲ್ಲಿ ಇದೆ.

ರಾಜಣ್ಣ ಅವರು ಯಾವ ಪಾರ್ಟಿಯವರು ಮಾಡಿದ್ದಾರೆ ಎಂದು ಹೇಳಿಲ್ಲ. ಹನಿ ಟ್ಯ್ರಾಪ್ ನಲ್ಲಿ ಎಲ್ಲಾ ಪಕ್ಷದವರು ಸೇರಿ 48 ಜನರಿದ್ದಾರೆ. ನನ್ನ ಹತ್ತಿರ ಯಾವುದೇ ದಾಖಲೆ ಇಲ್ಲ ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದಿದ್ದಾರೆ. ಯಾರೊಬ್ಬರನ್ನೂ ಗುರಿಯಾಗಿಸಿ ಯಾರ ಮೇಲೂ ಆರೋಪ ಮಾಡಿಲ್ಲ.

ಜನರಲ್ ಆಗಿ ಮಾತನಾಡಿದ್ದಾರೆ ಅಷ್ಟೇ. ಯಾರೇ ಮಾಡಿದ್ದರೂ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹೇಳಿದ್ದಾರೆ. ಯಾರು ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಯಾರು ತಪ್ಪಿತಸ್ಥರು ಇರುತ್ತಾರೋ ಅವರ ಮೇಲೆ ಕಠಿಣ ಕ್ರಮ ಆಗುತ್ತದೆ ಎಂದರು.

ಸಚಿವ ಸಂಪುಟ ಪುನರ್‌ರಚನೆ ವಿಷಯ ಪ್ರಸ್ತಾಪಿಸಿದಾಗ ಗರಂ ಆದ ಸಚಿವ ಬೋಸರಾಜ್ ಇಂಥ ಯಾವುದೇ ಪ್ರಸ್ತಾಪಗಳು ಆಗಿಲ್ಲ.

ಇದೆಲ್ಲಾ ಸುಳ್ಳು. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಇದೆ. ಇದಕ್ಕಾಗಿ ಪಕ್ಷ ಸಂಘಟಿಸಲು ಸೂಚನೆ ಆಗಿದೆ. ನಂತರ ಎಐಸಿಸಿ ಕಮಿಟಿ ಸಭೆ ಇದೆ. ಅಲ್ಲಿ ಎಲ್ಲರೂ ಭಾಗವಹಿಸಬೇಕಾಗಿದೆ. ಆಡಳಿತ ಇನ್ನೊಂದಷ್ಟು ಚುರುಕಾಗಬೇಕಾಗಿದೆ. ಅದು ಬಿಟ್ಟರೆ ಸಚಿವ ಸಂಪುಟ ಬದಲಾವಣೆ ವಿಷಯವೇ ಪ್ರಸ್ತಾಪವಾಗಿಲ್ಲ ಎಂದು ಹೇಳಿದರು.

Share this article