ಕನ್ನಡಪ್ರಭ ವಾರ್ತೆ ಬಂಟ್ವಾಳ
ಗೂಡಿನಬಳಿ, ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪು ಸಹಿತ ಹಲವೆಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ತಾಲೂಕಿನ ನದಿ ತೀರದ ಸಾಕಷ್ಟು ಮನೆಗಳು ಮುಳುಗಡೆಯಾಗಿವೆ. ನಾವೂರ ಗ್ರಾಮದ ಮೈಂದಾಳ ಎಂಬಲ್ಲಿ ಸುಮಾರು 8 ಮನೆಗಳಿಗೆ ನೀರು ನುಗ್ಗಿದ್ದು, ಗುಡ್ಡಯಂಗಡಿಯಲ್ಲಿ 5 ಹಾಗೂ ಆಲಡ್ಕದಲ್ಲಿ 15ಕ್ಕೂ ಅಧಿಕಮನೆಗಳು ಮುಳುಗಡೆಯಾಗಿವೆ. ಪಾಣೆಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು ಗ್ರಾಮಗಳಲ್ಲಿ ಕೃಷಿ ತೋಟಗಳು, ಗದ್ದೆಗಳು ಜಲಾವೃತಗೊಂಡಿವೆ.
ಬಂಟ್ವಾಳ- ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಬಿ.ಸಿ. ರೋಡಿನ ಬಸ್ತಿಪಡ್ಪು, ಆಲಡ್ಕ ಪ್ರದೇಶ ಮೊದಲಾದ ಪ್ರದೇಶದಲ್ಲಿ ರಸ್ತೆಗೆ ನೀರು ಬಿದ್ದು ಸಂಚಾರ ಕಡಿತಗೊಂಡಿದೆ. ಗುಡ್ಡಕುಸಿತ: ತಾಲೂಕಿನ ಹಲವು ಕಡೆಗಳಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆದಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ವಿಟ್ಲ ಕಲ್ಲಡ್ಕದ ಮುಖ್ಯ ರಸ್ತೆಯಲ್ಲಿ ಗುಡ್ಡಕುಸಿತಕ್ಕೆ ಮಣ್ಣು ಜರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ರಸ್ತೆ ಬದಿಯ ಗುಡ್ಡ ಜರಿತದಿಂದ ಗುಡ್ಡದಲ್ಲಿದ್ದ ಬಂಡೆಕಲ್ಲೊಂದು ರಸ್ತೆ ಕಡೆಗೆ ಬಾಗಿ ನಿಂತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಮ್ಟಾಡಿ ಗ್ರಾಮದ ದೇವಿನಗರ ರುದ್ರಭೂಮಿ ಬಳಿ ಮರಬಿದ್ದು, ಗುಡ್ಡಜರಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ಕಸ್ಬಾ ಗ್ರಾಮದ ಅಗ್ರಾರ್ - ಜಕ್ರಿಬೆಟ್ಟು ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಅಪಾಯಕಾರಿ ಮನೆಗಳ ನಿವಾಸಿಗಳ ಸ್ಥಳಾಂತರಕ್ಕೆ ಶಾಸಕ ಸೂಚನೆ: ಕಳೆದ ಕೆಲವು ದಿನಗಳಿಂದ ಅತಿಯಾಗಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ, ಅಂತಹ ಅಪಾಯಕಾರಿ ಮನೆಗಳನ್ನು ಹಾಗೂ ಸುರಕ್ಷಿತವಲ್ಲದ ಮತ್ತು ನೀರು ನುಗ್ಗಿ ಅಪಾಯವಿರುವ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಶಾಸಕ ರಾಜೇಶ್ ನಾಯ್ಕ್ ಅವರು, ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಾಂತರ ಎಸ್ಐ ಹರೀಶ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಎ. ಗೋವಿಂದ ಪ್ರಭು, ನಂದರಾಮ ರೈ, ಗಣೇಶ್ ರೈ ಮಾಣಿ, ಜನಾರ್ದನ, ಸದಾನಂದ ನಾವೂರ, ಧನಂಜಯ ಶೆಟ್ಟಿ ಸರಪಾಡಿ, ಅಶೋಕ್ ಶೆಟ್ಟಿ ಸರಪಾಡಿ, ದೇಜಪ್ಪ ಬಾಚಕೆರೆ, ಶಾಂತಪ್ಪ ಪೂಜಾರಿ ಹಟ್ಟದಡ್ಕ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಆನಂದ ಶೆಟ್ಟಿ ಬಾಚಕೆರೆ ಮತ್ತಿತರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷರಾದ ಬೇಬಿ ಕುಂದರ್,ಪುರಸಭಾ ಸದಸ್ಯರಾದ ವಾಸು ಪೂಜಾರಿ,ರಿಯಾಜ್ ಬಂಟ್ವಾಳ,ಮನೋಹರ ನೇರಂಬೋಳು, ಜಗದೀಶ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.