ವಿಶೇಷ ವರದಿ
ಒಂದೆಡೆಯಲ್ಲಿ ಜಿಲ್ಲೆಯ ರೈಲ್ವೇ ವ್ಯವಸ್ಥೆ ದಿನೇ ದಿನೇ ಆಧುನೀಕರಣದತ್ತ ಮುಖಮಾಡುತ್ತಿದ್ದರೆ, ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮೊಡಂಕಾಪು ಬಳಿಯ ರೈಲ್ವೇ ಮೇಲ್ಸೇತುವೆ ಮಾತ್ರ ಓಬಿರಾಯನ ಕಾಲದ ಸ್ಥಿತಿಯಲ್ಲೇ ಉಳಿದಿದೆ. ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಗೆ ಹಾಗೂ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯ ಈ ರೈಲ್ವೇ ಮೇಲ್ಸೇತುವೆ, ಹಳೆಯ ವಿನ್ಯಾಸದಲ್ಲಿರುವುದು ವಿಪರ್ಯಾಸವೇ ಸರಿ.
ಈ ಸೇತುವೆಯ ಅಡಿಭಾಗದಲ್ಲಿ ಕಲ್ಲಿನಿಂದ ನಿರ್ಮಿಸಲಾದ ಬೃಹತ್ ಪಿಲ್ಲರ್ ಇದ್ದು, ರಸ್ತೆಯೇ ಎರಡು ಭಾಗಗಳಾಗಿ ವಿಭಜನೆಯಾಗಿದೆ. ಇದರಿಂದ ಒಂದೇ ಸಮಯದಲ್ಲಿ ಎದುರುಮುಖವಾಗಿ ವಾಹನಗಳು ಬಂದಾಗ ಚಾಲಕರು ಅಪಾಯವನ್ನು ಎದುರಿಸುತ್ತಾ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಮೇಲ್ಭಾಗದಲ್ಲಿ ಪ್ಯಾಸೆಂಜರ್ ಮತ್ತು ಸರಕು ರೈಲುಗಳು ನಿರಂತರವಾಗಿ ಸಂಚರಿಸುತ್ತಿದ್ದರೂ, ಕೆಳಭಾಗದ ರಸ್ತೆ ಮಾತ್ರ ಕಾಲಕ್ಕೆ ಅನುಗುಣವಾಗಿ ಸುಧಾರಣೆ ಕಂಡಿಲ್ಲ.ಪೊಳಲಿ, ಕಟೀಲು, ಬಜಪೆ ವಿಮಾನ ನಿಲ್ದಾಣ, ಎಂಆರ್‌ಪಿಎಲ್ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗುವ ಮುಖ್ಯ ಸಂಪರ್ಕ ಮಾರ್ಗವೇ ಇದಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದರೂ, ಸುರಕ್ಷತಾ ಸೌಲಭ್ಯಗಳ ಕೊರತೆ ಇಲ್ಲಿದೆ.ಅಪಾಯಕಾರಿ ಕಮಾನುಗಳು: ಮೇಲ್ಸೇತುವೆಗಳ ಸುರಕ್ಷತೆ ದೃಷ್ಟಿಯಿಂದ ಘನ ವಾಹನಗಳ ನಿಯಂತ್ರಣಕ್ಕಾಗಿ ಅಳವಡಿಸಿದ ಕಬ್ಬಿಣದ ಕಮಾನುಗಳು ಈಗ ಅಪಘಾತಗಳಿಗೆ ಕಾರಣವಾಗುತ್ತಿವೆ. ಯಾವುದೇ ಎಚ್ಚರಿಕೆ ಫಲಕಗಳಿಲ್ಲದೆ, ಪ್ರತಿಬಿಂಬಿಸುವ ಬಣ್ಣಗಳಿಲ್ಲದೆ ಇರುವುದರಿಂದ, ವಿಶೇಷವಾಗಿ ರಾತ್ರಿ ಮತ್ತು ಮಳೆಗಾಲದಲ್ಲಿ ಅವು ಚಾಲಕರಿಗೆ ಕಾಣಿಸಿಕೊಳ್ಳುವುದೇ ಕಷ್ಟ. ಇದರಿಂದ ಕಳೆದ ಕೆಲ ತಿಂಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕೆಲ ಸಂದರ್ಭಗಳಲ್ಲಿ ಜೀವಹಾನಿಯೂ ಸಂಭವಿಸಿದೆ.ಭದ್ರತಾ ಕ್ರಮಗಳ ಕೊರತೆ: ಸೇತುವೆ ಅಡಿಭಾಗದಲ್ಲಿ ರೈಲ್ವೇ ಸಿಬ್ಬಂದಿ ನಿಯೋಜನೆಯಿಲ್ಲದೇ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸಂಚಾರ ನಿಯಂತ್ರಣದ ಅಭಾವ ಮತ್ತು ಮೂಲಭೂತ ಸುರಕ್ಷತಾ ವ್ಯವಸ್ಥೆಗಳ ಕೊರತೆ ಈ ಪ್ರದೇಶವನ್ನು ‘ಅಪಘಾತಗಳ ಹಾಟ್‌ಸ್ಪಾಟ್’ ಆಗಿ ಮಾರ್ಪಟ್ಟಿದೆ.
ಬ್ರಿಜೇಶ್ ಚೌಟ, ದ.ಕ. ಸಂಸದರು
ಬಿ. ರಮಾನಾಥ ರೈ, ಮಾಜಿ ಸಚಿವರು
ಸದಾಶಿವ ಬಂಗೇರ, ಮಾಜಿ ಅಧ್ಯಕ್ಷರು, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ