ರಿಯಾಜಅಹ್ಮದ ದೊಡ್ಡಮನಿ
ಮುಂಡರಗಿ ತಾಲೂಕು ಕೇಂದ್ರದಿಂದ ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬಹುತೇಕ ಕಡೆ ಎರಡೂ ಬದಿಗೆ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದು ರಸ್ತೆಗೆ ಚಾಚಿವೆ. ಮುಂಡರಗಿ ಪಟ್ಟಣದಿಂದ ಬರದೂರ, ಮೇವುಂಡಿ, ಡಂಬಳ, ಜಂತ್ಲಿ ಶಿರೂರ, ಚುರ್ಚಿಹಾಳ, ಡೋಣಿ ಕ್ರಾಸ್, ಕದಾಂಪುರ, ಪಾಪನಾಶಿ, ಅಡವಿಸೋಮಾಪುರ ಮಾರ್ಗವಾಗಿ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗೆ ಹುಲುಸಾಗಿ ಬೆಳೆದಿರುವ ಹುಲ್ಲು ಮತ್ತು ಮುಳ್ಳುಕಂಟಿಗಳಿಂದ ಸಂಚಾರ ದುಸ್ತರವಾಗಿದೆ. ಎದುರು ಬರುವ ವಾಹನಗಳು ಸರಿಯಾಗಿ ಗೋಚರಿಸದೇ ಅಪಘಾತಗಳು ಸಂಭವಿಸುತ್ತಿವೆ.
ಸುರಕ್ಷತಾ ಫಲಕಗಳಿಲ್ಲ: ಈ ರಸ್ತೆಯುದ್ದಕ್ಕೂ ಅಳವಡಿಸಿರುವ ಸುರಕ್ಷತಾ ಫಲಕಗಳು ಹಾಳಾಗಿವೆ. ಅಲ್ಲದೇ ಹಲವೆಡೆ ಅಪಘಾತದ ವಲಯ, ಮಾರ್ಗಸೂಚಿಗಳ ಫಲಕಗಳನ್ನು ಹಾಕಿಲ್ಲ. ಡಂಬಳ ಗ್ರಾಮದಿಂದ ತೆರಳುವಾಗ ಡೋಣಿ ಕ್ರಾಸ್ ಬಳಿ ಅಳವಡಿಸಿರುವ ಲೋಹದ ತಡೆಗೋಡೆ ಸಂಪೂರ್ಣ ಹಾಳಾಗಿದೆ. ಜಂಧಿಪೀರಾ ದರ್ಗಾಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಹಾಳಾಗಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ ಎಂದು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಾರೆ ಗ್ರಾಮಸ್ಥರು.ಕೂಡಲೇ ಸಂಬಂಧಪಟ್ಟವರು ರಸ್ತೆಗೆ ಚಾಚಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸಬೇಕು. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ವಿವಿಧ ಗ್ರಾಮಸ್ಥರು, ಸಂಘಟನೆಗಳ ಮುಖಂಡರು.
ರಸ್ತೆಯುದ್ದಕ್ಕೂ ಮುಳ್ಳಿಕಂಟಿ ಬೆಳೆದು ಚಾಚಿರುವ ಕಾರಣ ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಈ ಭಾಗ ಅಪಘಾತ ವಲಯವಾಗಿದ್ದರಿಂದ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಕಾರು ಚಾಲನೆ ಮಾಡುವಂತಾಗಿದೆ ಎಂದು ಕಾರು ಚಾಲಕ ಎಸ್. ಹನುಮಂತಪ್ಪ ತಿಳಿಸಿದರು.