ಅಂಕೋಲಾ ಸಂತೆಯಲ್ಲಿ ಕನ್ನಡದಲ್ಲಿಯೇ ವಿದೇಶಿ ಮಹಿಳೆಯರ ಚೌಕಾಶಿ!

KannadaprabhaNewsNetwork |  
Published : Oct 27, 2024, 02:20 AM IST
ಅಂಕೋಲಾದ ಶನಿವಾರದ ಸಂತೆಯಲ್ಲಿ ಚೌಕಾಸಿಯಲ್ಲಿ ನಿರತರಾದ ವಿದೇಶಿ ಮಹಿಳೆಯರು.  | Kannada Prabha

ಸಾರಾಂಶ

ಹಣ್ಣು, ತರಕಾರಿ ಖರೀದಿಸಿ ಕೊನೆಗೆ ಅಂಕೋಲೆಯ ವಿಶೇಷ ಕಬ್ಬಿಣ ಹಾಲು ಸವಿದರು. ಇವರು ನಮ್ಮದೇ ಊರಿನವರೇನೋ ಎನಿಸುವಷ್ಟರ ಮಟ್ಟಿಗೆ ಗೋಚರಿಸಿದ್ದು ಇತರ ಗ್ರಾಹಕರು ಸಹ ಮುಗುಳು ನಗುತ್ತಾ ಅವರ ಕನ್ನಡ ಭಾಷಾ ಜ್ಞಾನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ರಾಘು ಕಾಕರಮಠ

ಅಂಕೋಲಾ:

ತಾಲೂಕಿನ ಮಹಿಳೆಯರು ದಿನಬಳಕೆಯ ವಸ್ತು, ತರಕಾರಿ ಹಾಗೂ ಬಟ್ಟೆಗಳ ಖರೀದಿಯ ಸಮಯದಲ್ಲಿ ವಸ್ತುಗಳ ಬೆಲೆಯ ಕುರಿತು ಚೌಕಾಸಿ ನಡೆಸಿ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಆದರೆ, ಅಂಕೋಲಾದ ಶನಿವಾರದ ವಾರದ ಸಂತೆಯಲ್ಲಿ ವಸ್ತುಗಳ ಖರೀದಿಯಲ್ಲಿ ವಿದೇಶೀ ಮಹಿಳೆಯರು ತೊಡಗಿದ್ದು ಸ್ಥಳೀಯ ಮಹಿಳೆಯರ ಹಾಗೆಯೇ ಬೆಲೆ ಚೌಕಾಸಿ ನಡೆಸಿ ತರಕಾರಿ ಖರೀದಿಸಿ ಎಲ್ಲರಲ್ಲಿ ಆಶ್ಚರ್ಯ ಉಂಟು ಮಾಡಿದರು.

ಅದರಲ್ಲೂ ಸಂವಹನಕ್ಕಾಗಿ ಕನ್ನಡ ಭಾಷೆಯನ್ನೇ ಬಳಸಲು ಪ್ರಯತ್ನಿಸಿದ್ದು ವಿಶೇಷ. ಕನ್ನಡ ಶಬ್ದಗಳ ಬಳಕೆ ಕಡಿಮೆಯಾಗಿದ್ದರೂ ಹೇಳಬೇಕೆಂದಿದ್ದ ವಿಷಯವನ್ನು ಭಾವನೆಗಳ ಮೂಲಕ ವ್ಯಕ್ತಪಡಿಸಿ ವ್ಯಾಪಾರಿಗಳಿಗೆ ಮುಟ್ಟುವಂತೆ ಭಾಷೆ ಬಳಸಿ ಗಮನ ಸೆಳೆದರು.

ಜಗತ್ತಿನಲ್ಲಿಯೇ ಗುರುತಿಸಲ್ಪಟ್ಟಿರುವ ಶ್ರೀಕ್ಷೇತ್ರ ಗೋಕರ್ಣಕ್ಕೆ ವಿದೇಶಿಗರು ಹೆಚ್ಚಾಗಿ ಬರುತ್ತಾರೆ. ಹೀಗೆ ಬಂದಾಗ ಅಲ್ಲಿಯ ಬೈಕ್‌ ಬಾಡಿಗೆ ಪಡೆದು ಪ್ರವಾಸ ಹೊರಡುತ್ತಾರೆ. ಗೋವಾ, ಯಾಣ ಮತ್ತಿತರ ಕಡೆಗೆ ತೆರಳುವಾಗ ಅಂಕೋಲಾ ಮಾರ್ಗವಾಗಿ ತೆರಳಬೇಕು. ಆ ವೇಳೆ ವಿದೇಶಿಯರು ಆ ದಿನದ ವಿಶೇಷ ಇರುವ ಕಡೆಗಳಲ್ಲಿ ಭೇಟಿ ಕೊಟ್ಟು ಸ್ವಾದ ಆಹ್ವಾದಿಸುತ್ತಾರೆ. ಹಾಗಾಗಿ ವಾರದ ಸಂತೆ ನಡೆಯುವ ಜಾಗಲ್ಲಿಯೂ ಭೇಟಿ ನೀಡಿ ತಮ್ಮ ವ್ಯವಹಾರಿಕ ಸಾಮರ್ಥ್ಯವನ್ನು ನಮ್ಮದೇ ಭಾಷೆಯಲ್ಲಿ ತೋರಿಸಿ ರಂಜನೆ ಪಡೆಯುತ್ತಾರೆ.

ಹಣ್ಣು, ತರಕಾರಿ ಖರೀದಿಸಿ ಕೊನೆಗೆ ಅಂಕೋಲೆಯ ವಿಶೇಷ ಕಬ್ಬಿಣ ಹಾಲು ಸವಿದರು. ಇವರು ನಮ್ಮದೇ ಊರಿನವರೇನೋ ಎನಿಸುವಷ್ಟರ ಮಟ್ಟಿಗೆ ಗೋಚರಿಸಿದ್ದು ಇತರ ಗ್ರಾಹಕರು ಸಹ ಮುಗುಳು ನಗುತ್ತಾ ಅವರ ಕನ್ನಡ ಭಾಷಾ ಜ್ಞಾನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಒಟ್ಟಿನಲ್ಲಿ ಸಂತೆಯಲ್ಲಿ ವಿದೇಶಿಗರ ಆಗಮನದಿಂದ ತಾವೂ ಖುಷಿಪಟ್ಟಿದ್ದು ನೋಡುಗರಿಗೂ ಮುದ ನೀಡಿದ್ದಂತೂ ಸುಳ್ಳಲ್ಲ.

ಮೀನು ಮಾರುಕಟ್ಟೆಗೂ ಲಗ್ಗೆಯಿಟ್ಟ ವಿದೇಶಿಯರು:

ತರಕಾರಿ ಸಂತೆಗೆ ಭೇಟಿಕೊಟ್ಟ ವಿದೇಶಿ ಮಹಿಳೆಯರು ಕೊಂಚ ಮುಂದೆ ಸಾಗಿ ಮೀನು ಮಾರುಕಟ್ಟೆಗೂ ಲಗ್ಗೆಯಿಟ್ಟಿದ್ದಾರೆ. ಇಡೀ ಮಾರುಕಟ್ಟೆ ಒಮ್ಮೆ ತಿರುಗಿ ಅಲ್ಲಿನ ಮೀನು ಮಾರುವ ಮಹಿಳೆಯರ ಜತೆ ಸಂವಹನ ನಡೆಸಿ ಮೀನುಗಳ ಮಾರಾಟದ ಕುರಿತು ಕೊಂಚ ಮಾಹಿತಿ ಕಲೆ ಹಾಕಿ ತೆರಳಿದ್ದಾರೆ. ಮಾರುಕಟ್ಟೆಯ ರಸ್ತೆ ಸಂಪೂರ್ಣ ಗಲೀಜಾಗಿದ್ದರೂ ಮನಸ್ಸು ಮಾಡಿ ಒಳನುಗ್ಗಿ ತಮ್ಮ ಸಂಚಾರಿ ಹವ್ಯಾಸದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲ ಮೀನುಗಳ ಬಗ್ಗೆ ವಿಚಾರಿಸಿ, ಚರ್ಚಿಸಿ ಮರಳಿದ್ದಾರೆ.ನಾವು ಭಾರತಕ್ಕೆ ಬಂದು 8 ದಿನ ಕಳೆದಿವೆ. ನಮಗೆ ಹೊಸ ಹೊಸ ವಿಷಯ ತಿಳಿದಿಕೊಳ್ಳಲು ತುಂಬ ಇಷ್ಟ. ಹಾಗಾಗಿ ಸ್ಕೂಟಿಯ ಮೇಲೆ ಇಬ್ಬರೂ ಇಲ್ಲಿಗೆ ಬಂದೆವು. ನಮ್ಮ ದೇಶಕ್ಕೆ ತೆರಳಿದಾಗ ಉತ್ತರ ಕನ್ನಡದ ವಿಶೇಷತೆ ಹಾಗೂ ಪ್ರಮುಖ ಅನುಭವಗಳ ಕುರಿತು ಲೇಖನ ಬರೆಯುತ್ತೇವೆ. ಹಾಗಾಗಿ ಇಲ್ಲಿಗೆ ಭೇಟಿ ನೀಡಿದ್ದೆವು ಎಂದು ಡೆನ್ಮಾರ್ಕ್‌ನ ಡೈಸಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ