ಎಂ. ಪ್ರಹ್ಲಾದ್ ಕನಕಗಿರಿ
ಸಮಾನತೆ ಹರಿಕಾರ ಬಸವಣ್ಣವರ ಜಯಂತಿ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಿಂಗಳ ಪರ್ಯಂತ ಆಧ್ಯಾತ್ಮ ಪ್ರವಚನ ಹಮ್ಮಿಕೊಂಡು ದುಶ್ಚಟ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಡಾ.ಚನ್ನಮಲ್ಲಶ್ರೀಗಳು ಪಣತೊಟ್ಟು ನಿಂತಿದ್ದು, ಯುವ ಸಮೂಹದ ಪರಿವರ್ತನೆಗೆ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಹಿಂದುಳಿದ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚು ಒತ್ತು ನೀಡಿದ್ದು, ಮಾನಸಿಕ ರೋಗಿಗಳಿಗೆ ಉಚಿತ ಔಷಧ ವಿತರಣೆ, ಉಚಿತ ಆರೋಗ್ಯ ಶಿಬಿರ ಹೀಗೆ ನಾನಾ ಸಾಮಾಜಿಕ ಸೇವೆ ಶ್ರೀಮಠವು ಮಾಡುತ್ತಿದೆ.
ಈ ಎಲ್ಲ ಸೇವೆಗಳ ಜತೆಗೆ ಹಳ್ಳಿ-ಹಳ್ಳಿಗೂ ಬಸವೇಶ್ವರರ ಪರಿಕಲ್ಪನೆ, ಅವರ ವಿಚಾರ ತಲುಪುವ ನಿಟ್ಟಿನಲ್ಲಿ ಚನ್ನಮಲ್ಲ ಶ್ರೀಗಳು ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳುತ್ತಿದ್ದು, ಜನರಿಗೆ ಸದ್ವಿಚಾರ ತಿಳಿಸಿಕೊಟ್ಟು ದುಶ್ಚಟ ಮುಕ್ತರಾಗಿಸಲು ಸಮಾಜ ಪರಿವರ್ತನೆಯ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶ್ರೀಗಳ ಕಾರ್ಯ ಮೆಚ್ಚಿ ತಾಲೂಕಿನ ಅಡವಿಬಾವಿ ತಾಂಡಾ, ಆಗೋಲಿ, ಗಾಣದಾಳ ಹಾಗೂ ಬಸರಿಹಾಳ ಗ್ರಾಮದ ನೂರಾರು ಭಕ್ತರು ಸೇರಿ ರೊಟ್ಟಿ, ಕಾಳು ಪಲ್ಯ, ಚಟ್ನಿ ಪುಡಿ, ಮಾದಲಿ ಸೇರಿ ನಾನಾ ದಿನಸಿ ಖಾದ್ಯ ಶ್ರೀಮಠಕ್ಕೆ ಸಮರ್ಪಣೆ ಮಾಡಿ ಧನ್ಯತೆ ಮೆರೆದರು.ಲಂಬಾಣಿ ಉಡುಗೆಯಲ್ಲಿ ಖಾದ್ಯ ಅರ್ಪಣೆ:ತಾಲೂಕಿನ ಅಡವಿಬಾವಿ ತಾಂಡಾದ ಭಕ್ತರು ಇಲ್ಲಿನ ವೀರಭದ್ರೇಶ್ವರ ದೇಗುಲದಿಂದ ಶ್ರೀಮಠದವರೆಗೆ ಲಂಬಾಣಿ ವೇಷಭೂಷಣದಲ್ಲಿ ಬಂದಿದ್ದ ಮಹಿಳೆಯರು ತಾವೇ ತಯಾರಿಸಿದ ಖಾದ್ಯ ಬಿದುರಿನ ಬುಟ್ಟಿಯಲ್ಲಿ ಹೊತ್ತು ಲಂಬಾಣಿ ಹಾಡು ಹಾಡುತ್ತಾ ಮೆರವಣಿಗೆ ಮೂಲಕ ಮಠಕ್ಕೆ ಅರ್ಪಣೆ ಮಾಡುವುದು ವಿಶೇಷವಾಗಿತ್ತು. ಹೀಗೆ ಶ್ರೀಮಠದ ಮುಖ್ಯದ್ವಾರದಲ್ಲಿ ಬಂದಿದ್ದ ಬಸವ ಬುತ್ತಿ ವಿಶೇಷ ಪೂಜೆ, ಆರತಿಯೊಂದಿಗೆ ಬರಮಾಡಿಕೊಳ್ಳಲಾಯಿತು.
ಏನಿದು ಬಸವ ಬುತ್ತಿ ಕಾರ್ಯಕ್ರಮ?: ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಆಚರಿಸುವ ಕಾರ್ಯಕ್ರಮ ಇದಾಗಿದ್ದು, ಸಂಸ್ಕೃತಿಯಲ್ಲಿ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯಾಗಿದೆ. ಇದು ಮುಖ್ಯವಾಗಿ ಬಸವೇಶ್ವರರ ಜಯಂತಿಯಲ್ಲಿ ಆಚರಿಸಲಾಗುತ್ತದೆ. ಸಾಮಾಜಿಕ ಸೌಹಾರ್ದತೆಗಾಗಿ ಎಲ್ಲ ವರ್ಗದ ಮನಸ್ಸು ಕೂಡಿಕೊಂಡು ಬಸವಣ್ಣನಿಗೆ ಅರ್ಪಿಸುವ ಆಹಾರದ ಸಂಕೇತವಾಗಿ ಆಚರಿಸಲಾಗುತ್ತಿದೆ.