ಮಡಿಕೇರಿ: ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ, ಸಹನೆ ಮತ್ತು ಸಹಬಾಳ್ವೆ ಬೆಳೆಯುತ್ತದೆ ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ದಿನಮಾನದಲ್ಲಿ ನುಡಿದಂತೆ ನಡೆಯುವವರು ಕಡಿಮೆ, ಮತದಾರನಿಂದ ಆಡಳಿತ ನಡೆಸುವ ವರೆಗೆ ನುಡಿದಂತೆ ನಡೆಯುತ್ತಿಲ್ಲ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಬಸವ ಜಯಂತಿಯಂದು ಕಾಯಕ ಮಾಡಬೇಕು. ಅದನ್ನು ಬಿಟ್ಟು ರಜೆ ನೀಡಿದ್ದಾರೆ. ಕಾಯಕ ಮಾಡಿ ಬಸವಣ್ಣ ಅವರಿಗೆ ಗೌರವ ಸಲ್ಲಿಸಬೇಕು, ಅದನ್ನು ಬಿಟ್ಟು ರಜೆ ನೀಡುವುದು ಸರಿಯಲ್ಲ ಎಂದು ಸ್ವಾಮೀಜಿ ಪ್ರತಿಪಾದಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ಬಸವಣ್ಣ ಅವರ ಚಿಂತನೆ ಮತ್ತು ಆದರ್ಶಗಳು ಸಾರ್ವಕಾಲಿಕವಾಗಿದ್ದು, ಎಲ್ಲೆಡೆ ಪಸರಿಸಿದೆ ಎಂದರು. ಬಸವೇಶ್ವರರು ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕರಾಗಿದ್ದು, ಒಂದು ಸಾವಿರ ವರ್ಷಗಳ ಹಿಂದೆಯೇ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಕಾಯಕಯೋಗಿ ಎಂದು ವರ್ಣಿಸಿದರು. ಕೊಡಗು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ ಸಾಂಸ್ಕೃತಿಕ ನಾಯಕ ಬಸವೇಶ್ವರರು ಕಾಯಕ ಮತ್ತು ದಾಸೋಹದ ಮೂಲಕ ಸಮಾಜದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.ಬಸವಣ್ಣ ಅವರು ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ. ದಯವಿಲ್ಲದ ಧರ್ಮ ಯಾವುದಯ್ಯ, ಅರಿವೇ ಗುರು ಎಂದು ಬಸವಣ್ಣ ಅವರು ಸಾರಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಪಿ.ಕಲಾವತಿ, ತಹಸೀಲ್ದಾರ್ ಶ್ರೀಧರ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಸಾಂಬಶಿವಯ್ಯ, ತಾಲೂಕು ಘಟಕದ ಅಧ್ಯಕ್ಷ ರುದ್ರಪ್ರಸನ್ನ, ಮಧುಸೂದನ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಡಾ.ರವಿಕಿರಣ, ಡಾ.ರವಿಶಂಕರ, ವೆಂಕಟೇಶ, ಭಾಸ್ಕರ ಇತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು, ಮಣಜೂರು ಮಂಜುನಾಥ್ ನಿರೂಪಿಸಿದರು. ಶಿಕ್ಷಕರಾದ ಬಸವರಾಜು ಮತ್ತು ಬಿ.ಸಿ.ಶಂಕ್ರಯ್ಯ ತಂಡದವರು ನಾಡಗೀತೆ ಹಾಡಿದರು, ಮಂಜು ಭಾರ್ಗವಿ ತಂಡದವರು ವಚನ ಗಾಯನ ಹಾಡಿದರು, ಷಷ್ಠಿ ವಚನ ಗಾಯನ ಹಾಡಿದರು, ಕೆ.ಎಸ್.ಮೂರ್ತಿ ವಂದಿಸಿದರು.