ವ್ಯಸನಕ್ಕೆ ಬಲಿಯಾಗಿ ಸಮಾಜಕ್ಕೆ ಹೊರೆಯಾಗದಿರಿ

KannadaprabhaNewsNetwork | Published : Jan 28, 2025 12:50 AM

ಸಾರಾಂಶ

ಈ ಆತ್ಮ ಪರಮಾತ್ಮನ ಭಿಕ್ಷೆಯಾಗಿದೆ. ಆತ್ಮ ಪರಮಾತ್ಮನನ್ನು ಸೇರಿದಾಗ ಮಾತ್ರ ಮನುಷ್ಯನ ಜನ್ಮ ಪಾವನವಾಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಯುವಕರು ಸಮಾಜ ಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆ ಹೊರತು ವ್ಯಸನಕ್ಕೆ ಬಲಿಯಾಗಿ ಸಮಾಜಕ್ಕೆ ಹೊರೆಯಾಗಿ ಬಾಳಬಾರದು ಎಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದ ಬಸವಮಾರ್ಗ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕುಲವನ್ನು ಬೆಳಗಬೇಕೆ ವಿನಃ ಕುಲ ನಾಶಕ್ಕೆ ಮುನ್ನುಡಿ ಬರೆಯಬಾರದು. ಇಂದಿನ ವೇಗದ ಜಗತ್ತಿನಲ್ಲಿ ಯುವಕರು ಮದ್ಯಪಾನ ಸೇರಿದಂತೆ ನಾನಾ ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಈ ಆತ್ಮ ಪರಮಾತ್ಮನ ಭಿಕ್ಷೆಯಾಗಿದೆ. ಆತ್ಮ ಪರಮಾತ್ಮನನ್ನು ಸೇರಿದಾಗ ಮಾತ್ರ ಮನುಷ್ಯನ ಜನ್ಮ ಪಾವನವಾಗುತ್ತದೆ. ಆದರೆ, ಕುಡಿತದ ವ್ಯಸನಕ್ಕೆ ಬಲಿಯಾಗಿ ಪರಮಾತ್ಮನನ್ನು ಸೇರುವ ಮಾರ್ಗವನ್ನು ನಾವೆಲ್ಲರೂ ಮುಚ್ಚಿಕೊಳ್ಳುತ್ತಿದ್ದೇವೆ. ದೇಹ ಸದೃಢವಾಗಿಸಲು ಯೋಗಾ, ವ್ಯಾಯಾಮ, ಸಾತ್ವಿಕ ಆಹಾರ ನೀಡಬೇಕು. ಮನಸ್ಸನ್ನು ಸದೃಢವಾಗಬೇಕಾದರೆ ಜ್ಞಾನಬೇಕು. ಆತ್ಮ ಸದೃಢವಾಗಬೇಕಾದರೆ ಭಗವಂತನನ್ನು ಸ್ಮರಿಸಬೇಕು. ಇದರಿಂದ ಜೀವನ ಪಾವನವಾಗುತ್ತದೆ ಎಂದು ಅವರು ತಿಳಿಸಿದರು.

ವ್ಯಸನಿಗಳು ಇಂದಿನಿಂದಲೇ ದೊಡ್ಡ ಸಂಕಲ್ಪವನ್ನು ಮಾಡಬೇಕು. ಮುಂದಿನ ದಿನಗಳಲ್ಲಿ ಈ ಕುಡಿತದ ದಾಸ್ಯದಿಂದ ಹೊರಬಂದು ಸಮಾಜ ಸೇವೆಗೆ ನನ್ನ ಜನ್ಮವನ್ನು ಮುಡಿಪಾಗಿ ಇಡುತ್ತೇನೆ ಎಂದು ನಿರ್ಧಾರ ಮಾಡಬೇಕು. ನಿಮ್ಮ ಹಿಂದೆ ಹೆಂಡತಿ, ಮಕ್ಕಳು, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಬಸವಮಾರ್ಗ ‌ಫೌಂಡೇಷನ್ ಸಂಸ್ಥಾಪಕ ಬಸವಣ್ಣ ಮಾತನಾಡಿ, ಮನುಷ್ಯನಿಗೆ ರೋಗ ಬಂದರೆ ಆತನಿಗೆ ಎಲ್ಲರೂ ನೆರವಾಗುತ್ತಾರೆ. ಆದರೆ, ವ್ಯಸನ ಎನ್ನುವ ರೋಗಕ್ಕೆ ತುತ್ತಾದರೆ ಮನೆಯಲ್ಲೇ ಆತನಿಗೆ ಜಾಗ ಇರುವುದಿಲ್ಲ. ಆತನನ್ನು ಈ‌ರೋಗದಿಂದ ಗುಣಪಡಿಸಬೇಕು ಎಂದು ಕೆಲವರು ಚಿಂತಿಸುವುದೂ ಇಲ್ಲ. ಹಾಗಾದರೆ ಅಮಲು ರೋಗಿಗಳು ಎಲ್ಲಿ ಹೋಗಬೇಕು. ಅವರಿಗೆ ಯಾವ ಆಶ್ರವಿದೆ. ಈ ನಿಟ್ಟಿನಲ್ಲಿ ಮಠ, ಮಾನ್ಯಗಳು ಅಮಲು ರೋಗಿಗಳಿಗೆ ಸಹಾಯ ಮಾಡಬೇಕು. ಸಮಾಜವನ್ನು ‌ಸರಿ‌ಮಾರ್ಗದಲ್ಲಿ‌ಮುನ್ನೆಡಸಲು ಮಾರ್ಗದರ್ಶನ ಮಾಡಬೇಕು ಎಂದು‌ ಮನವಿ ಮಾಡಿದರು.

ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಕಾಯಕ ಯೋಗಿ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್, ಲಿಂಗಾಯತ ಮಹಾಸಭಾದ ಮಂಡ್ಯ ಜಿಲ್ಲಾಧ್ಯಕ್ಷ ಎಂ.ಎಸ್. ಮಂಜುನಾಥ, ಅರ್ಚಕರ ಸಂಘದ ಮದ್ದೂರು ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಮೊದಲಾದವರು ಇದ್ದರು.

Share this article