ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸೋಮವಾರ ಕರ್ನಾಟಕ ವಿಕಲಚೇತನರ ಒಕ್ಕೂಟ, ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟ ಮತ್ತು ಶಾಶ್ವತ ನೀರಾವರಿ ಹೋರಾಟ ಸಮಿತಿ ಬೆಂಬಲ ವ್ಯೆಕ್ತ ಪಡಿಸಿ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾದವು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಾತನಾಡಿ, ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂಬ ಘೋಷವಾಕ್ಯವು ಕೇಳಲು ಮಾತ್ರ ಹಿತವೆನಿಸುವುದೇ ಹೊರತು, ಕಾರ್ಯರೂಪಕ್ಕೆ ಬರುವುದು ಕನಸಿನ ಮಾತಾಗಿದೆ. ದೇಶಕ್ಕೆ ಸ್ವಾತಂತ್ರ್ಯಹಸ್ತಾಂತರಗೊಂಡು 77 ವರ್ಷಗಳೇ ಕಳೆದರೂ, ಸಹ ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ, ಜಾತಿ ತಾರತಮ್ಯಗಳು ಕಣ್ಣಿಗೆ ರಾಚುವಂತಿದ್ದು, ಬಡವರು, ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಮಿತಿಮೀರಿವೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು ಎಗ್ಗಿಲ್ಲದೆ ಸಾಗುತ್ತಿವೆ. ಸಾಮಾನ್ಯ ಜನರಿಗೆ ಮೂಲಭೂತವಾಗಿ ಬೇಕಾದ ಭೂಮಿ, ವಸತಿ, ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಆಳುವ ಸರ್ಕಾರಗಳು ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿವೆ ಎಂದು ಕಿಡಿಕಾರಿದರು.ಕರ್ನಾಟಕ ವಿಕಲಚೇನರ ಹಾಗೂ ನಿಸರ್ಗ ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ಬಿ.ಕಿರಣ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ವಿಕಲಚೇತರು ನಿವೇಶನ ಇಲ್ಲದೆ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅರ್ಹ ವಿಕಲಚೇತನ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿಯಲ್ಲೇ ಕೂಡಲೇ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ನೀಡಬೇಕು, ಜಿಲ್ಲೆಯ ಹಾಲಿ ಕಂದಾಯ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ಕೆಲವೇ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವ್ಯವಸಾಯ ಮಾಡುವ ರೈತರಿಗೆ ಅನುಕೂಲ ಕಲ್ಪಿಸಬೇಕು. ಕ್ರಷರ್, ಗಣಿಗಾರಿಕೆಗಳಿಗೆ ಅನುಮತಿ ನೀಡಬಾರದು, ಕ್ರಷರ್ ಗಳಿಂದ ಸುಮಾರು ರೈತರು ಬೆಳೆಯುವ ಬೆಳೆಗಳು ನಾಶವಾಗುತ್ತಿದ್ದು, ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ, ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಮತ್ತಿತರ ಅಧಿಕಾರಿಗಳೊಂದಿಗೆ ಆಗಮಿಸಿದ ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ ಮಾತನಾಡಿ, ನಾಳೆ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ಸಭೆಯಲ್ಲಿ ಸಮಸ್ಯೆಗಳ ಈಡೇರಿಕೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಪ್ರತಿಭಟನೆ ಕೈಬಿಡುವಂತೆ ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಧರಣಿ ನಿರತರು ಮೊದಲು ಸಮಸ್ಯೆಗಳನ್ನು ಪರಿಹರಿಸಿ ನಂತರ ಸತ್ಯಾಗ್ರಹ ಕೈಬಿಡುತ್ತೇವೆ ಎಂದು ಧರಣಿ ಮುಂದುವರಿಸಿದರು.
.