ನರೇಗಲ್ಲ: 12ನೇ ಶತಮಾನದಲ್ಲಯೇ ಅನುಭವ ಮಂಟಪದಲ್ಲಿ ಸರ್ವ ಧರ್ಮಿಯರನ್ನು ಒಗ್ಗೂಡಿಸಿಕೊಂಡು ಧರ್ಮ ಸಂವಿಧಾನವನ್ನು ರಚಿಸಿದ ಬಸವಣ್ಣನವರು ಧೀಮಂತ ಮಹಾ ಮಾನವತಾವಾದಿಯಾಗಿದ್ದರು ಎಂದು ಎಸ್‌ಎವಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ ತಿಳಿಸಿದರು.ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಜೇಂದ್ರಗಡ ರಸ್ತೆಯಲ್ಲಿನ ಬಸವೇಶ್ವರ ಎಂಜಿನಿಯರಿಂಗ್ ವರ್ಕ್ಸ್‌ನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಲಿಂಗಾಯತ ಧರ್ಮವು ತನ್ನದೆ ಪ್ರಾಚೀನ ಪರಂಪರೆಯ ಶ್ರೀಮಂತ ಧಾರ್ಮಿಕ ಹಿನ್ನೆಲೆ ಹೂಂದಿದ್ದು, ಮಾನವ ಧರ್ಮದ ಉದ್ಧಾರವನ್ನು ಬಯಸುತ್ತಾ ಬಂದಿದೆ ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ನಮ್ಮ ಜೀವನಕ್ಕೊಂದು ಅರ್ಥ ಬರುತ್ತದೆ ಎಂದರು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾ. ಸಿ.ವಿ. ವಂಕಲಕುಂಟಿ, ಸಮಾಜದ ಗೌರವ ಅಧ್ಯಕ್ಷ ಗುರುಪಾದಪ್ಪ ಬೆಲ್ಲದ ಸೇರಿದಂತೆ ಇತರರು ಇದ್ದರು. 6ದಿಂದ 12 ವರ್ಷದ ಮಕ್ಕಳಿಗೆ ಏರ್ಪಡಿಸಿದ್ದ ವಚನಗಳ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಂಗೀತ ಶಿಕ್ಷಕಿ ಗೀತಾ ಬೋಪಳಾಪೂರ ಸಂಗೀತ ಸೇವೆ ಸಲ್ಲಿಸಿದರು. ನಂತರ ಅನ್ನಪ್ರಸಾದ ನಡೆಯಿತು. ವೀರೇಶ ಬಂಗಶೆಟ್ಟರ ಸ್ವಾಗತಿಸಿದರು. ಬಸವೇಶ ಜೋಳದ ನಿರೂಪಿಸಿದರು. ಶಿವಪ್ಪ ಜೋಳದ ವಂದಿಸಿದರು.