ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಮತ್ತು ಲಿಂಗಾಯಿತ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಒಗ್ಗೂಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಜಾತಿ ಮತ್ತು ಧರ್ಮಗಳು ರಾಜಕೀಕರಣಗೊಂಡು ಅಸಮಾನತೆ ಮತ್ತು ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹೊತ್ತಿನಲ್ಲಿ ರಾಜ್ಯಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಉತ್ತಮವಾಗಿದೆ. ಅವರ ತತ್ವ ಸಿದ್ಧಾಂತಗಳನ್ನು ಸಮಸಮಾಜ ನಿರ್ಮಾಣಕ್ಕೆ ಪ್ರಚಾರ ಪಡಿಸುವುದು ಇಂದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.ಸಾಂಸ್ಕೃತಿಕ ನಾಯಕತ್ವ ಘೋಷಣೆಗೆ ಸೀಮಿತವಾಗದೆ ಜನಮನದಲ್ಲಿ ಬಸವಣ್ಣನವರ ವಿಚಾರ ಕ್ರಾಂತಿಗಳನ್ನು ಮೂಡಿಸುವ ಮತ್ತು ಶ್ರಮಿಕ ಸಂಸ್ಕೃತಿಯನ್ನು ಪೋಷಿಸುವ ಕಾರ್ಯ ಆಗಬೇಕಿದೆ. 12 ನೇ ಶತಮಾನದಲ್ಲೇ ಜಾತಿ, ಧರ್ಮ, ಮತ್ತು ಲಿಂಗಭೇದವನ್ನು ಮೀರಿ ಸೃಷ್ಟಿಸಿದ ಅನುಭವಮಂಟಪ ಇಂದಿನ ರಾಜಕೀಯ ವ್ಯವಸ್ಥೆಗೆ ಮಾದರಿಯಾಗಬೇಕು ಎಂದರು.
ನಂತರ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿ ಕಚೇರಿಯಿಂದ ಜಿಪಂ ಕಾವೇರಿ ಸಭಾಂಗಣಕ್ಕೆ ತೆರಳಿ ಡೀಸಿ ಡಾ. ಕುಮಾರ್ ಮತ್ತು ಎಡಿಸಿ ಎಚ್.ಎನ್. ನಾಗರಾಜು ಅವರಿಗೆ ಸರ್ಕಾರದ ಪರವಾಗಿ ಅಭಿನಂದನಾ ಪತ್ರ ಸಲ್ಲಿಸಿದರು.