ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್ ಹಾಲ್ ಪಕ್ಕದ ಮೈದಾನದಲ್ಲಿ ಜ.27 ರಂದು ಸಂಜೆ 5.30ಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರಿಗೆ ‘ಅಮೃತಮಯಿ’ ಶೀರ್ಷಿಕೆಯಡಿ ಅಭಿನಂದನಾ ಕಾರ್ಯಕ್ರಮ ಹಾಗೂ ಅವರ ಬದುಕು-ಸಾಧನೆ ಕುರಿತ ‘ದಿ ಐರನ್ ಮ್ಯಾನ್’ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಕಂಡಂತಹ ಅಪರೂಪದ ಮೌಲ್ಯಾಧಾರಿತ ರಾಜಕಾರಣಿ, ಶ್ರಮಿಕರ ಉದ್ಯೋಗದಾತರಾಗಿ, ಕೈಗಾರಿಕಾ ಕ್ಷೇತ್ರದ ರೂವಾರಿಗಳಾಗಿ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಜೀವ ತುಂಬಿದವರು ಎಸ್.ರುದ್ರೇಗೌಡರು. ಅವರಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಅಂದು ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಗೌರವ ಸಮರ್ಪಣೆ ಮಾಡುವರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು, ಗೌಡರ ಬದುಕು-ಸಾಧನೆ ಕುರಿತ “ಎಸ್. ರುದ್ರೇಗೌಡ-ದಿ ಐರನ್ ಮ್ಯಾನ್ " ಪುಸ್ತಕವನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಬಿ.ಎಲ್.ಶಂಕರ್ ಅವರು ಗೌಡರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ, ಎಸ್.ರುದ್ರೇಗೌಡರನ್ನು ಕುರಿತ ಕಿರುಚಿತ್ರ ಕೂಡ ಲೋಕಾರ್ಪಣೆಗೊಳ್ಳಲಿದೆ ಎಂದು ವಿವರಿಸಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಫ್ ಆಫ್ ಹಾಸ್ಪಿಟಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಜಿ. ಬೆನಕಪ್ಪ ಮಾತನಾಡಿ, ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಕಷ್ಟು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ವಿವಿಧ ವಿಚಾರ ಗೋಷ್ಠಿಗಳು ನಡೆಯಲಿವೆ, ಪಕ್ಕದ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆ ಯಲಿದೆ, ಈಗಾಗಲೇ ಅಭಿಮಾನಿಗಳು, ಹಿತೈಷಿಗಳು, ಬಂಧುಗಳು, ಎಲ್ಲ ಸಮಾಜದ ಗಣ್ಯರು, ಎಲ್ಲರಿಗೂ ಆಹ್ವಾನ ಪತ್ರಿಕೆಯನ್ನು ನೀಡಿ ಆಮಂತ್ರಿಸಲಾಗಿದೆ. ಒಂದು ವೇಳೆ ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ತಿಳಿದು ನಮ್ಮ ಹೆಮ್ಮೆಯ ಈ ಸಂಭ್ರಮದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ಅಂದು ಬೆಳಗ್ಗೆ 10.30ರಿಂದ ಶ್ರಮದಿಂದ ಸಾರ್ಥಕತೆಯೆಡೆಗೆ ಶೀರ್ಷಿಕೆಯಡಿ ಯವಕರಿಗೆ ಮಾರ್ಗದರ್ಶಿ ವಿಚಾರಗೋಷ್ಠಿ ನಡೆಯಲಿದೆ ಎಂದರು.ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ‘ಮೌಲ್ಯಾಧಾರಿತ ರಾಜಕಾರಣ’ ಕುರಿತು, ಬೆಂಗಳೂರು ಅದಮ್ಯ ಚೇತನ ಫೌಂಡೇಷನ್‌ನ ತೇಜ್ವಸಿನಿ ಅನಂತಕುಮಾರ್ ಅವರು ‘ಪರಿಸರ ಪ್ರಜ್ಞೆಯೇ ಸಮಾಜ ಸೇವೆ’ ಕುರಿತು ಹಾಗೂ ಕಿರ್ಲೋಸ್ಕರ್ ಫೆರುಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮ್ಯಾನೇಜ್‌ಮೆಂಟ್ ಆಂಡ್ ಟೆಕ್ನಿಕಲ್ ಅಡ್ವೈಜರ್ ಬಿ.ಎಸ್. ಗೋವಿಂದ್ ಅವರು ‘ಸಾಧನೆಗೊಂದು ಗುರಿ’ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಸಿಕೊಡಲಿದ್ದಾರೆ. ವಿಚಾರಗೋಷ್ಟಿಯ ಅಧ್ಯಕ್ಷತೆಯನ್ನು ಬೆಂಗಳೂರು ರಮಣಶ್ರೀ ಫೌಂಡೇಷನ್‌ನ ಅಧ್ಯಕ್ಷ ನಾಡೋಜ ಎಸ್.ಷಡಕ್ಷರಿ ಅವರು ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಸಮಾಜ ಹಿರಿಯ ಮುಖಂಡರಾದ ಎನ್.ಜೆ.ರಾಜಶೇಖರ್, ತಮ್ಮಡಿಹಳ್ಳಿ ನಾಗರಾಜ್, ಬಳ್ಳೆಕೆರೆ ಸಂತೋಷ್, ಉದ್ಯಮಿ ಬಾಳೆಕಾಯಿ ಮೋಹನ್ ಮತ್ತಿತರರು ಹಾಜರಿದ್ದರು.ಬಾಕ್ಸ್:
‘ಅಂತರಂಗ-ಬಹಿರಂಗ’ ಸಂವಾದವಿವಿಧ ಕ್ಷೇತ್ರಗಳ ಆಯ್ದ ಯುವಕರೊಂದಿಗೆ ಶ್ರೀ ರುದ್ರೇಗೌಡರ ಬದುಕು-ಸಾಧನೆ ಕುರಿತು ‘ಅಂತರಂಗ-ಬಹಿರಂಗ’ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅವರ ಬೆಳವಣಿಗೆ, ಕಷ್ಟಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಾಧಿಸಿದ ರೀತಿ, ಉದ್ಯಮಗಳನ್ನು ಕಟ್ಟಿದ ಶ್ರಮ, ಎಲ್ಲರನ್ನೂ ಜೊತೆಯಾಗಿ ಬೆಳೆಸಿದ ಪರಿ, ಈ ಎಲ್ಲ ವಿಚಾರಗಳನ್ನೂ ಅವರೊಂದಿಗಿನ ಆತ್ಮೀಯ ಸಂವಾದದಲ್ಲಿ ಅವರ ಪುತ್ರಿ ಚೈತ್ರ ಅರುಣ್ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.-------------------------ಪೋಟೊ: 25ಎಸ್‌ಎಂಜಿಕೆಪಿ03:ಶಿವಮೊಗ್ಗದ ಮಥುರಾ ಪ್ಯಾರಡೇಸ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.