ಕನ್ನಡಪ್ರಭ ವಾರ್ತೆ ತುಮಕೂರು12ನೇ ಶತಮಾನದ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಸಾಮಾನ್ಯರಿಗೂ ಸಮಾನತೆ ಸಾರಿದ ಮಹಾಪುರುಷ ಅವರು. ಬಸವಣ್ಣನವರ ತತ್ವಗಳು ಭಾಷಣಕ್ಕೆ ಸೀಮಿತವಾಗದಿರಲಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕರೆ ನೀಡಿದರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ನಾವೆಲ್ಲರೂ ವೇದಿಕೆ ಮೇಲೆ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಭಾಷಣ ಮಾಡುವುದಕ್ಕಷ್ಟೇ ಸೀಮಿತವಾಗುತ್ತಿದ್ದೇವೆ. ಜಾತಿ ಮತಗಳನ್ನು ತೊರೆಯಬೇಕೆಂದು ಹೇಳುತ್ತಿದ್ದೇವೆಯೇ ಹೊರತು ಯಾರೂ ಪಾಲಿಸುತ್ತಿಲ್ಲ. ದೇಶದಲ್ಲಿ ಜಾತಿ ವ್ಯವಸ್ಥೆ ಇರಬಾರದು ಹಾಗೂ ನಾವೆಲ್ಲರೂ ಸೇರಿ ಈ ವ್ಯವಸ್ಥೆಯನ್ನು ಅಳಿಸುವುದೇ ಬಸವಣ್ಣನವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ನಿತ್ಯ ಕಾಯಕದಲ್ಲಿ ಗೌರವವಿರಬೇಕು ಮತ್ತು ಮಹನೀಯರೆಲ್ಲರೂ ನುಡಿದಂತೆ ನಡೆದವರಾಗಿದ್ದು, ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ವೇದಿಕೆ ಮೇಲೆ ಪ್ರತಿಷ್ಠೆಗಾಗಿ ಮಾತನಾಡಿದರೆ ಸಾಲದು, ನುಡಿದಂತೆ ನಡೆಯಬೇಕು. ಬಸವಣ್ಣನವರು ಸಮಾಜ ಸುಧಾರಣೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದು, ದಾಸೋಹ ವ್ಯವಸ್ಥೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಇಂದು ಸಿದ್ದಗಂಗಾ ಮಠದಲ್ಲಿ ನಿತ್ಯವೂ ಹತ್ತು ಸಾವಿರ ಮಕ್ಕಳಿಗೆ ದಾಸೋಹ ವ್ಯವಸ್ಥೆ ನಡೆಯುತ್ತಿದೆ. ಇಂತಹ ನಾಡಿನಲ್ಲಿರುವ ನಾವು ಮಹನೀಯರ ತತ್ವಗಳನ್ನು ಅನುಸರಿಸುವ ಮೂಲಕ ನಮ್ಮ ಶ್ರಮದಲ್ಲಿ ಅಲ್ಪ ಭಾಗವನ್ನಾದರೂ ಅನ್ಯರ ಶ್ರೇಯೋಭಿವೃದ್ಧಿಗಾಗಿ ಬಳಸಬೇಕು ಎಂದು ಕುಲಪತಿಗಳು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ಎನ್. ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ನೈತಿಕ ಶಕ್ತಿ, ಸಾಮಾಜಿಕ ಕೊಡುಗೆ ಹಾಗೂ ಭಕ್ತಿಯ ಮಾದರಿ ಇಡೀ ಮಾನವ ಕುಲಕ್ಕೆ ಆದರ್ಶವಾಗಿದೆ. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಬಂದ ಅವರ ಚಿಂತನೆಗಳು, ಭಕ್ತಿಯ ಭಂಡಾರ, ಸಮಾನತೆ ಮತ್ತು ಹಸಿವನ್ನು ನೀಗಿಸಲು ಜಾರಿಗೆ ತಂದ ದಾಸೋಹ ವ್ಯವಸ್ಥೆ ಇಂದಿನ ಜಗತ್ತಿಗೆ ಮಾದರಿಯಾಗಿವೆ. ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದ್ದು, ಇಂದು ಯುದ್ಧ ನಡೆಸುತ್ತಿರುವವರು ಅವರ ಆದರ್ಶಗಳಿಂದ ಪ್ರೇರಣೆ ಪಡೆದು ಯುದ್ಧವನ್ನು ನಿಲ್ಲಿಸಲಿ ಎಂದು ತಿಳಿಸಿದರು.ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್. ಎಸ್. ಮೋಹನ್, ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.