ಶಿರಹಟ್ಟಿ: ದೇಶದ ಭದ್ರತೆ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಯುವಕರು ದೇಶಭಕ್ತಿ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಸದಾ ಸಿದ್ಧರಾಗಿರಬೇಕು ಎಂದು ಮಾಜಿ ಯೋಧ ಎ.ಬಿ. ಹೆಸರೂರ ಕರೆ ನೀಡಿದರು.ಪಟ್ಟಣದ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದ ರೇಂಜರ್ಸ್ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಹಾಗೂ ಪೋಷಕರ ದಿನ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಹಳೆ ವಿದ್ಯಾಥಿಗಳಾದ ಡಿ.ಪಿ. ಪವಾರ್ ಹಾಗೂ ಎ.ಬಿ. ಹೆಸರೂರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಭಕ್ತಿ ಎಂದರೆ ಕೇವಲ ಗಡಿಯಲ್ಲಿ ಹೋರಾಡುವುದಲ್ಲ. ಕಾನೂನು ಪಾಲನೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಕಾಪಾಡುವುದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಕೂಡ ದೇಶಸೇವೆಯ ಭಾಗವಾಗಿದೆ. ಹೆತ್ತ ತಾಯಿಯಷ್ಟೇ ನಮ್ಮನ್ನು ರಕ್ಷಿಸುವ ದೇಶವು ಮುಖ್ಯ ಎಂದರು.ಇಂಡಿಯನ್ ಏರ್ ಫೋರ್ಸ್‌ನಲ್ಲಿ ೨೦ ವರ್ಷಗಳ ಸೇವೆ ಸಲ್ಲಿಸಿದ ಡಿ.ಪಿ. ಪವಾರ್ ಮಾತನಾಡಿ, ನಾನು ಕೂಡ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ತಾಯ್ನಾಡಿಗಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆತಿದ್ದು ನಂತರ ಮರಳಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಬದುಕಿನ ಸೌಭಾಗ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಭಜಂತ್ರಿ ಮಾತನಾಡಿ, ದೇಶದ ಯೋಧರನ್ನು ಸ್ಮರಿಸುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ. ಯುವಪೀಳಿಗೆ ಅಂತಹ ಮೌಲ್ಯವನ್ನು ಅರಿತು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.
ರೆಂಜರ್ಸ್ ಘಟಕದ ಲೀಡರ್ ಹಾಗೂ ಕಾರ್ಯಕ್ರಮ ಆಯೋಜಕರಾದ ಸುಧಾ ಹುಚ್ಚಣ್ಣವರ ಪ್ರಸ್ತಾವಿಕವಾಗಿ ಮಾತನಾಡಿದರು. ಪೋಷಕರ ದಿನಾಚರಣೆಯ ಪ್ರಯುಕ್ತ ಪಾಲಕರ ಪ್ರತಿನಿಧಿಯಾಗಿ ಆಗಮಿಸಿದ ಗಂಗವ್ವ ಬಸಪ್ಪ ಬಡ್ಡೆಪ್ಪನವರ ಅವರನ್ನು ಗೌರವಿಸಲಾಯಿತು.ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರಾದ ಕುಮಾರಿ ವಿಜಯಲಕ್ಷ್ಮಿ ಡೊಳ್ಳಿನ, ಸ್ನೇಹಾ ಮುಳುಗುಂದ, ಚೈತ್ರಾ ಲಮಾಣಿ ಕಾರ್ಗಿಲ್ ವಿಜಯ ದಿವಸ್ ಕುರಿತು ಮಾತನಾಡಿದರು. ಕೌಟುಂಬಿಕ ಹಿನ್ನೆಲೆಯನ್ನೇ ಮರೆಯುತ್ತಿರುವ ಇಂದಿನ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು "ವಂಶವೃಕ್ಷ " ಪರಿಕಲ್ಪನೆಯಲ್ಲಿ ವಿದ್ಯಾರ್ಥಿನಿಯರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜಯಲಕ್ಷ್ಮಿ ಡೊಳ್ಳಿನ ಪ್ರಥಮ ಸ್ಥಾನ, ಅಪ್ಸಾನಾ ತಹಸಿಲ್ದಾರ್ ದ್ವಿತೀಯ ಸ್ಥಾನ, ಸುಮಯ್ಯ ಡಾಲಾಯತ್ ತೃತೀಯ ಸ್ಥಾನ ಪಡೆದರು. ಲಿಂಗಮ್ಮ ಮಾದರ, ಸಿಮ್ರಾನ್ ಒಂಟಿ ಸಮಾಧಾನಕರ ಬಹುಮಾನ ಪಡೆದರು.
ಉಪನ್ಯಾಸಕರಾದ ಎನ್. ಹನುಮರಡ್ಡಿ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ವೈ.ಎಸ್. ಪಂಗಣ್ಣವರ್, ಪಿ.ವಿ. ಹೊಸೂರ್, ನೀಲಕಂಠ ಕಂಕನವಾಡಿ, ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರು, ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.