ಗಜೇಂದ್ರಗಡ: ಬಡಾವಣೆಯಲ್ಲಿ ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯವರು ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಚರಂಡಿಯ ಗಲೀಜು ಹಾಗೂ ಮಣ್ಣು, ಕಸವನ್ನು ಗ್ರಾಪಂ ಮುಂದೆ ಸುರಿದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ತಾಲೂಕಿನ ಸೂಡಿ ಗ್ರಾಮದಲ್ಲಿ ನಡೆದಿದೆ.

ಕಳೆದ ಕೆಲ ತಿಂಗಳಿನಿಂದ ಗ್ರಾಮದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಚರಂಡಿಗಳಲ್ಲಿ ನೀರು, ಕಸ ಹಾಗೂ ಕಡ್ಡಿ ನಿಂತು ಗಬ್ಬು ವಾಸನೆ ಹರಡುತ್ತಿದೆ. ಪರಿಣಾಮ ಸಂಜೆಯಾದರೆ ಮನೆಯಲ್ಲಿ ಸೊಳ್ಳೆಗಳ ಹಾವಳಿ, ಗಬ್ಬು ವಾಸನೆ ಹರಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು.

ಬಡಾವಣೆಯ ಚರಂಡಿ ಸ್ವಚ್ಛತೆಗೆ ಮುಂದಾಗಬೇಕೆಂದು ಆಗ್ರಹಿಸಿ ನಿವಾಸಿಗಳು ಗ್ರಾಪಂ ಅಧಿಕಾರಿಗಳ ಎದುರು ಹಲವಾರು ಬಾರಿ ಗೋಗರೆದರೂ ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಮಂಗಳವಾರ ಬೆಳಗ್ಗೆ ಬಡಾವಣೆಯಲ್ಲಿನ ಚರಂಡಿಗಳಲ್ಲಿನ ಗಲೀಜು ಸೇರಿ ಕಸ, ಮಣ್ಣು ತಂದು ಗ್ರಾಮ ಪಂಚಾಯಿತಿ ಎದುರು ಸುರಿದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮ, ಪಟ್ಟಣ ಸೇರಿ ನಗರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸಾಕಷ್ಟು ಪ್ರಚಾರ ಮಾಡುತ್ತಿವೆ. ಆದರೆ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡದೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಘಟನೆ ಕುರಿತು ಪಿಡಿಒ ಬಸವಂತಪ್ಪ ವಡ್ಡರ ಅವರನ್ನು ದೂರವಾಣಿ ಮೂಲಕ ಅನೇಕ ಬಾರಿ ಸಂರ್ಪಕಿಸಿದರೂ ಕರೆ ಸ್ವೀಕರಿಸಲಿಲ್ಲ.

ಸಮಸ್ಯೆ ಪರಿಹರಿಸಲಿ: ಗ್ರಾಮದ ರಾಜೀವ್ ಗಾಂಧಿ ಬಡಾವಣೆಯಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಪರಿಣಾಮ ಚರಂಡಿಗಳಲ್ಲಿ ತುಂಬಿದ್ದ ಕಸ, ಕಡ್ಡಿಯನ್ನು ತಂದು ಸೂಡಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸುರಿಯಲಾಗಿದೆ. ಇನ್ನಾದರೂ ಗ್ರಾಮದ ನಿವಾಸಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಗ್ರಾಪಂ ಮುಂದಾಗಲಿ ಎಂದು ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ನಿವಾಸಿಗಳು ತಿಳಿಸಿದರು.ಕಸ ಹಾಕಿದ್ದು ತಪ್ಪು: ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿ ಎದುರು ದಿಢೀರನೇ ಕಸ ತಂದು ಹಾಕಿದ್ದು ತಪ್ಪು. ಮೇಲಧಿಕಾರಿಗಳಿಗೆ ತಿಳಿಸಬಹುದಿತ್ತು. ಕಸ ತಂದು ಹಾಕಿರುವವರ ಮೇಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಿಳಿಸಲಾಗುವುದು. ಜತೆಗೆ ಸುರಿದಿರುವ ಕಸವನ್ನು ಸ್ವಚ್ಛಗೊಳಿಸಲು ತಿಳಿಸಿದ್ದೇನೆ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ತಿಳಿಸಿದರು.