ಕನ್ನಡಪ್ರಭ ವಾರ್ತೆ ಮಧುಗಿರಿ
ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗುವಂತಹ ಹಾಗೂ ಸಂವಿಧಾನಕ್ಕೆ ಕುತ್ತು ತರುವಂತ ವಿಷಮ ಸನ್ನಿವೇಶದಲ್ಲಿ ಬಸವಣ್ಣರವರು ಮತ್ತು ವಚನಕಾರರ ವಿಚಾರ ಧಾರೆಗಳು ಹೆಚ್ಚು ಪ್ರಸ್ತುತವೆನಿಸುತ್ತವೆ ಎಂದು ಉಪನ್ಯಾಸಕ ಎ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಡಗತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಏರ್ಪಡಿಸಿದ್ದ ಸಾಹಿತ್ಯ ಪರಿಷತ್ತಿನ ನಡಿಗೆ ವಿದ್ಯಾರ್ಥಿ ಕಡೆಗೆ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಜೀವನ ಮೌಲ್ಯ ಕುರಿತು ಮಾತನಾಡಿದರು.
ಸಮಮಾನತೆಯನ್ನು ಸಾಧಿಸುವ ಮಾರ್ಗದಲ್ಲಿ ಎರಡು ಮುಖ್ಯವಾದ ಅಂಶಗಳನ್ನು ವಚನಕಾರರಲ್ಲಿ ಗಮನಿಸ ಬಹುದಾಗಿದೆ. ಒಂದು ಸರ್ಕಾರ ಶಾಸನಗಳನ್ನು ಮಾಡುವ ಮೂಲಕ ಉತ್ಪನ್ನಗಳನ್ನು ಹೆಚ್ಚಿಸಿ ಅದನ್ನು ನಿಯಂತ್ರಿಸುವುದು . ಎರಡನೆಯದು ಅಸಂಗ್ರಹ ವೈರಾಗ್ಯ ನೀತಿ ಮುಂತಾದ ಆಚರಣೆಯ ಮೂಲಕ ಸ್ವಯಂ ಪ್ರೇರಣೆಯಿಂದ ಸಮಾನತೆಯನ್ನು ಸಾಧಿಸುವ ಚಳುವಳಿಯು ಈ ಎರಡು ಆದ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿತ್ತು ಎಂದರು.ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನಿಂದ್ರ ಕುಮಾರ್ ಮಾತನಾಡಿ, ಅತ್ಯುತ್ತಮವಾದ ಗುಣ ವಿಶೇಷಗಳೆಂದರ್ಥ. ಕಾರಣ ಅವು ಅನುಭಾವಮೃತಗಳು ಜೀವನ ಸತ್ಯಗಳು. ಯಾವುದೇ ಕಡ್ಡಾಯಗಳಿಂದ ಇಲ್ಲವೇ ಸರ್ಕಾರಿ ಕಾನೂನುಗಳಿಂದ ಜನರಲ್ಲಿ ಮೌಲ್ಯಗಳನ್ನು ತುಂಬಲು ಸಾಧ್ಯವಿಲ್ಲ. ಮೌಲ್ಯಗಳಿಗೆ ಒಂದೇ ದಾರಿಯಾದರೆ ಅಧರ್ಮ, ಅನ್ಯಾಯಗಳಿಗೆ ಹತ್ತಾರು ದಾರಿಗಳು. ಯಾವ ಶಾಸನಗಳು ಇವನ್ನು ಕಟ್ಟಿ ಹಾಕಲಾರವು. ಮೌಲ್ಯಗಳು ತೊಟ್ಟು ಬಿಸಾಕುವ ಬಟ್ಟೆಯಂತಲ್ಲ. ಬಿಟ್ಟು ಬಿಡುವ ಗಂಡ ಹೆಂಡತಿ ಸಂಬಂಧವಲ್ಲ. ಅವುಗಳು ಬದಲಾಯಿಸಲಾಗದ ಹೆತ್ತ ತಾಯಿ ಇದ್ದಂತೆ. ವಚನಗಳಲ್ಲಿ ಮೌಲ್ಯಗಳನ್ನು ಹುಡುಕಬೇಕಿಲ್ಲ. ಅವುಗಳೇ ಮೌಲ್ಯಗಳ ಪ್ರತೀಕ. ಬಹುತೇಕ ವಚನಗಳು ಸರ್ವಾಕಾಲಿಕ ಮೌಲ್ಯಗಳಾಗಿವೆ ಎಂದರು.
ನಿವೃತ್ತ ಪ್ರಾಂಶುಪಾಲ ಸಿ.ಕೃಷ್ಣಪ್ಪ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿಗೆ ಸೀಮಿತವಾಗಿದ್ದ ಸಾಹಿತ್ಯ ಚಟುವಕೆಗಳು ಇಂದು ಹೋಬಳಿ ಮಟ್ಟದ ಮನೆ ಮನೆಗೆ ಸಾಹಿತ್ಯಾಸಕ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ವಿಚಾರ. ವಿದ್ಯಾರ್ಥಿಗಳು ಪುಸ್ತಕ ಮತ್ತು ದಿನ ಪತ್ರಿಕೆಗಳನ್ನು ಕೊಂಡು ಓದುವ ನಿಟ್ಟಿನಲ್ಲಿ ಜ್ಞಾನದ ಜೊತೆಗೆ ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಆರ್. ಮಹೇಶ್ ಬಾಬು ಮಾತನಾಡಿದರು. ತಾಲೂಕು ಕಸಾಪ ಕಾರ್ಯದರ್ಶಿ ರಂಗಧಾಮಯ್ಯ. ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್ ವಿ.ರೆಡ್ಡಿಹಳ್ಳಿ, ಗೌರವ ಕಾರ್ಯದರ್ಶಿ ಕೆ.ಎನ್.ರಾಮು, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ನಾರಾಯಣಪ್ಪ, ಪಿಡಿಒ ಗೋಪಾಲ್, ಪ್ರಭಾರ ಪ್ರಾಂಶುಪಾಲ ನರೇಶ್.ಪುರವರ ಕಸಾಪ ಅಧ್ಯಕ್ಷ ಪಿ.ಕೆ.ರಂಗಸ್ವಾಮಿ, ಸಿಆರ್‌ಪಿ ಮಂಜುನಾಥ್, ಶಿಕ್ಷಕರಾದ ರಾಮಾಂಜಿನಪ್ಪ, ಮಮತ, ಶ್ರೀನಿವಾಸ್, ಚಂದ್ರಕಲಾ, ರಂಗನಾಯ್ಕ್, ಗೋಪಾಲಯ್ಯ ಹಾಗೂ ಉಪನ್ಯಾಕರು ಇದ್ದರು.