ಲಿಂಗ ಸಮಾನತೆ ಪ್ರತಿಪಾದಿಸಿದ ಮಹಾನ್ ಚಿಂತಕ ಬಸವಣ್ಣ

KannadaprabhaNewsNetwork |  
Published : Apr 21, 2026, 01:30 AM IST
20ಎಚ್ಎಸ್ಎನ್14 :  | Kannada Prabha

ಸಾರಾಂಶ

ಬಾಲ್ಯದಲ್ಲೇ ಅಪಾರ ಜ್ಞಾನ, ಪ್ರಬುದ್ಧತೆ ಹೊಂದಿದ್ದ ಬಸವಣ್ಣರು ಸಮಾಜದಲ್ಲಿದ್ದ ಮೂಢನಂಬಿಕೆ, ಅಸಮಾನತೆ, ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದವರು. ಅವರು ಕೇವಲ ತತ್ವಜ್ಞಾನಿಗಳಷ್ಟೇ ಅಲ್ಲ, ಶ್ರೇಷ್ಠ ಆಡಳಿತಗಾರರೂ ಆಗಿ, ಜನಪರ ಆಡಳಿತದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ವಿವರಿಸಿದರು. ಸಮಾಜದ ನ್ಯೂನ್ಯತೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ಬಸವಣ್ಣರು, ಅವುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿದು ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡಿದ್ದರು. ಇಂದಿನ ಕಾಲದಲ್ಲಿಯೂ ಅಂಥ ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ವಿರಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ಜಗಜ್ಯೋತಿ ಬಸವಣ್ಣನವರ ವಚನಗಳಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಿಕ್ಕು ತೋರಿಸುತ್ತಿದ್ದು, ಪ್ರತಿಯೊಬ್ಬರೂ ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ತಿಳಿಸಿದರು.

ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವಣ್ಣ ಹಾಗೂ ಇತರ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸುಮಾರು ೮೦೦ ವರ್ಷಗಳ ಹಿಂದೆಯೇ ಬಸವಣ್ಣರು ಜಾತಿ ಭೇದಭಾವವನ್ನು ಖಂಡಿಸಿ, ಲಿಂಗ ಸಮಾನತೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಚಿಂತಕರಾಗಿದ್ದರು ಎಂದು ಹೇಳಿದರು.

ಬಾಲ್ಯದಲ್ಲೇ ಅಪಾರ ಜ್ಞಾನ, ಪ್ರಬುದ್ಧತೆ ಹೊಂದಿದ್ದ ಬಸವಣ್ಣರು ಸಮಾಜದಲ್ಲಿದ್ದ ಮೂಢನಂಬಿಕೆ, ಅಸಮಾನತೆ, ಅನ್ಯಾಯಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದವರು. ಅವರು ಕೇವಲ ತತ್ವಜ್ಞಾನಿಗಳಷ್ಟೇ ಅಲ್ಲ, ಶ್ರೇಷ್ಠ ಆಡಳಿತಗಾರರೂ ಆಗಿ, ಜನಪರ ಆಡಳಿತದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ವಿವರಿಸಿದರು. ಸಮಾಜದ ನ್ಯೂನ್ಯತೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ಬಸವಣ್ಣರು, ಅವುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿದು ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡಿದ್ದರು. ಇಂದಿನ ಕಾಲದಲ್ಲಿಯೂ ಅಂಥ ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ವಿರಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. “ಕಾಯಕವೇ ಕೈಲಾಸ” ಎಂಬ ಅಮೂಲ್ಯ ಸಂದೇಶದ ಮೂಲಕ ದುಡಿಮೆಗೆ ದೈವತ್ವದ ಸ್ಥಾನ ನೀಡಿದ ಬಸವಣ್ಣರು, ಶ್ರಮದ ಮೂಲಕ ಯಾರು ಬೇಕಾದರೂ ಉನ್ನತಿಯನ್ನು ಸಾಧಿಸಬಹುದು ಎಂಬುದನ್ನು ಸಾರಿದರು. “ದಯೆಯೇ ಧರ್ಮದ ಮೂಲ” ಎಂಬ ಅವರ ತತ್ವವು ಮಾನವೀಯತೆಯ ಸಾರಾಂಶವಾಗಿದ್ದು, ಪ್ರತಿಯೊಬ್ಬರೂ ದಯೆ, ಕರುಣೆ, ಸಹಾನುಭೂತಿ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಬಸವಣ್ಣರು ಲಕ್ಷಾಂತರ ಶರಣರಿಗೆ ದೀಕ್ಷೆ ನೀಡಿದ್ದು, ಶರಣ ಸಂಪ್ರದಾಯದ ಮೂಲಕ ಸಮಾನತೆಯ ಚಿಂತನೆಗೆ ಹೊಸ ದಿಕ್ಕು ತೋರಿದರು. “ಅನುಭವ ಮಂಟಪ”ದ ಮೂಲಕ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ನೀಡಿದ ಅವರು, ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ್ದರು ಎಂದು ತಿಳಿಸಿದರು. ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದು, ಭಾಷೆಯ ಜೊತೆಗೆ ಸಾಮಾಜಿಕ ನ್ಯಾಯ, ಸಮಾನತೆ, ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿದೆ. ಇಂದಿನ ಸಮಾಜದಲ್ಲಿ ಇತರರನ್ನು ಟೀಕಿಸುವುದಕ್ಕಿಂತ ಮೊದಲು, ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಮನುಷ್ಯನಾಗಿ ಹುಟ್ಟಿದ ನಾವು ಪರಸ್ಪರ ಗೌರವದಿಂದ ಬದುಕಬೇಕು. ಅಸೂಯೆ, ದ್ವೇಷ, ಸುಳ್ಳು, ಹಿಂಸೆ ಇವುಗಳನ್ನು ತ್ಯಜಿಸಿ ಸತ್ಯ, ನೀತಿ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸಬೇಕು. “ನುಡಿದರೆ ಮುತ್ತಿನ ಹಾರವಾಗಿರಬೇಕು” ಎಂಬ ಬಸವಣ್ಣನವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಶಿವಶಂಕರ್‌ ಮಾತನಾಡಿ, ಬಸವಣ್ಣರು ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಲವಾದ ತಳಹದಿ ಹಾಕಿದ ಮಹಾನ್ ಚಿಂತಕರು. ಅವರ ವಿಚಾರಧಾರೆಗೆ ಅಂತ್ಯವೇ ಇಲ್ಲ. ಅನುಭವ ಮಂಟಪವು ವಿಶ್ವದಲ್ಲೇ ಮೊದಲ ಪ್ರಜಾತಾಂತ್ರಿಕ ವೇದಿಕೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು. ಬಸವಣ್ಣನವರು ಸ್ಥಾಪಿಸಿದ ಶರಣ ಸಂಪ್ರದಾಯ ಇಂದು ಸಹ ಸಾವಿರಾರು ಮಠಗಳ ಮೂಲಕ ಜೀವಂತವಾಗಿದ್ದು, ಸಾತ್ವಿಕ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತಿದೆ. ಕೆಟ್ಟು ಹೋಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಿ ಸಮಾನತೆಯ ದಾರಿ ತೋರಿಸಿದ ಮಹಾನ್ ಪುರುಷರು ಬಸವಣ್ಣರು ಎಂದು ಅವರು ಕೊಂಡಾಡಿದರು.ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಹಾಗೂ ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಮಾತನಾಡಿ, ಬಸವ ಜಯಂತಿಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಸವಣ್ಣನವರ ತತ್ವಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಕವಾಗಿ ಹರಡಿವೆ. ಯಾವುದೇ ಶುಭಕಾರ್ಯಕ್ಕೂ ಬಸವ ಜಯಂತಿಯನ್ನು ಆರಿಸಿಕೊಳ್ಳುವ ಪರಿಪಾಠವು ಅವರ ತತ್ವಗಳ ಪ್ರಭಾವವನ್ನು ತೋರಿಸುತ್ತದೆ ಎಂದರು. ಪ್ರಜಾಪ್ರಭುತ್ವ, ಸಮಾನತೆ ಮತ್ತು ಮೀಸಲಾತಿಯ ತತ್ವಗಳಿಗೆ ಬಸವಣ್ಣರು ಬುನಾದಿ ಹಾಕಿದ್ದು, ಅದನ್ನು ಡಾ. ಬಿ. ಆರ್‌. ಅಂಬೇಡ್ಕರ್‌ ಸಂವಿಧಾನದ ಮೂಲಕ ಬಲಪಡಿಸಿದರು ಎಂದು ಅಭಿಪ್ರಾಯಪಟ್ಟರು. ಬಸವ ತತ್ವಗಳನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ ಹಾಗೂ ಕಾನೂನು ಸಮಸ್ಯೆಗಳು ಎದುರಾಗುವ ಪರಿಸ್ಥಿತಿ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಬಸವಣ್ಣನವರ ತತ್ವಗಳನ್ನು ಸ್ಮರಿಸಿದರು. ಕಾರ್ಯಕ್ರಮವು ಭಕ್ತಿಭಾವ ಮತ್ತು ಚಿಂತನೆಗೆ ಪ್ರೇರಣೆಯಾದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಪಿ. ತಾರಾನಾಥ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ನವಿಲೇ ಪರಮೇಶ್ ಹಾಗೂ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್‌, ಬಸವ ಕೇಂದ್ರದ ಅಧ್ಯಕ್ಷ ಯು. ಎಸ್. ಬಸವರಾಜು, ಜಿಲ್ಲಾ ಘಟಕದ ಅಧ್ಯಕ್ಷೆ ಚಂದ್ರಮತಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ. ಎಸ್. ಅವಿನಾಶ್, ಜಿಲ್ಲಾ ವೀರಶೈವ-ಲಿಂಗಾಯತ ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್‌ ಹೊಸಮನಿ, ಕಾರ್ಯದರ್ಶಿ ರುದ್ರಕುಮಾರ್, ಸಹ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನವರ ವಚನಗಳು ವಿಶ್ವದ ಸಮಸ್ಯೆಗಳಿಗೆ ಪರಿಹಾರ: ಡಾ.ಕುಮಾರ
ಬಸವಣ್ಣನವರ ತತ್ವಗಳು ಸಮಾನತೆಗೆ ದಾರಿದೀಪ