ಎಲ್ಲಾ ವರ್ಗಗಳ ಸುಖ ಶಾಂತಿಗೆ ಮುನ್ನುಡಿ ಬರೆದ ಬಸವಣ್ಣ: ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ

KannadaprabhaNewsNetwork |  
Published : Apr 21, 2026, 01:15 AM IST
 | Kannada Prabha

ಸಾರಾಂಶ

ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದವರು ಬಸವಣ್ಣನವರು. ವಚನಗಳ ಮೂಲಕ ಜ್ಞಾನಭಂಡಾರವನ್ನು ಬಿತ್ತಿ ಶಿಲ್ಪದಂತೆ ಜ್ಞಾನವನ್ನು ಕೆತ್ತಿ ಮನುಕುಲಕ್ಕೆ ಜ್ಞಾನ ಬುತ್ತಿ ತುಂಬಿದರು. ಅವರು ಕೊಟ್ಟ ಜ್ಞಾನ ಮನುಕುಲದ ಸಾಮಾಜಿಕ ಒಗ್ಗಟ್ಟಿಗೆ ಇಂದು ಬುನಾದಿಯಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಅನುಭವ ಮಂಟಪದ ಮೂಲಕ ನವ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಸಮಾಜದ ಎಲ್ಲಾ ವರ್ಗಗಳ ಸುಖ ಶಾಂತಿಗೆ ಮುನ್ನುಡಿ ಬರೆದವರು ಜಗಜ್ಯೋತಿ ಬಸವೇಶ್ವರರು ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಬಣ್ಣಿಸಿದರು.

ನಗರದ ಕಂದಾಯ ಭವನ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಸಾಹಿತ್ಯವು ಕೇವಲ ಪಂಡಿತರಿಗೆ ಮತ್ತು ಬುದ್ಧಿವಂತರಿಗೆ ಮಾತ್ರ ಅರ್ಥವಾಗುವ ಭಾಷೆಯಲ್ಲಿತ್ತು. ಬಸವಣ್ಣನವರು ಅದನ್ನು ಗಮನಿಸಿ, ಸಮಾಜದ ದೋಷಗಳನ್ನು ತಿದ್ದಲು ಅತ್ಯಂತ ಸರಳವಾದ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದರು ಬಸವಣ್ಣನವರು ಎಂದರು.

ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಷ್ಟೇ ಅಲ್ಲದೆ, ಜೀವನೋಪಾಯಕ್ಕಾಗಿ ಮಾಡುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು ಎಂಬ ''''''''''''''''ಕಾಯಕ'''''''''''''''' ತತ್ವವನ್ನು ಅವರು ಬೋಧಿಸಿದರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಎಲ್ಲ ರಂಗಗಳಲ್ಲಿಯೂ ಸಮಗ್ರವಾಗಿ ರೂಪಗೊಳ್ಳಬೇಕಾದರೆ ವಚನಗಳ ಚಿಂತನೆ ಅತ್ಯಗತ್ಯ ಎಂದು ಬಸವಣ್ಣ ಸಾರಿದರು. ಎಲ್ಲರೂ ಅವರ ಚಿಂತನೆಗಳನ್ನು ಪಾಲಿಸಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ವಿದ್ವಾನ್ ಚಂದ್ರಶೇಖರಯ್ಯ, ಬಸವಣ್ಣನವರು ತಮ್ಮನ್ನು ತಾವು ತಿದ್ದಿಕೊಳ್ಳುವ ಮೂಲಕ ಸಮಾಜವನ್ನು ತಿದ್ದಿದರು. ವಚನಗಳ ಮೂಲಕ ಬದುಕಿನ ದಾರಿಯನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. 12ನೇ ಶತಮಾನ ಇಡೀ ವಿಶ್ವದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾಲ. ಅಂದಿನ ಅನುಭವ ಮಂಟಪದಲ್ಲಿ ಎಲ್ಲಾ ಜಾತಿ ವರ್ಗದವರಿಗೆ ಅವಕಾಶ ಕಲ್ಪಿಸಿಕೊಟ್ಟು ಅಂದೇ ಸಮಾನತೆಯನ್ನು ಸಾರಿದ್ದರು. ಅದು ಇಂದಿನ ಸಂಸತ್‌ಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಧರ್ಮ ಸಂಘರ್ಷವನ್ನು ತಡೆಯಲು ದಯೆಯುಳ್ಳ ಧರ್ಮ ಸ್ಥಾಪನೆಗೆ ಅಡಿಗಲ್ಲು ಹಾಕಿದವರು ಬಸವಣ್ಣನವರು. ಅವರ ವಚನಗಳನ್ನು ಅರ್ಥ ಮಾಡಿಕೊಂಡು ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ಜಾತಿ, ಮತ, ಕಂದಾಚಾರದ ವಿರುದ್ಧ ಗಟ್ಟಿ ಧ್ವನಿ ಎತ್ತಿದವರು ಬಸವಣ್ಣನವರು. ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್ ಮಾತನಾಡಿ, ನುಡಿದಂತೆ ನಡೆದು ಯಾವ ಪದವಿಗೂ ಆಸೆ ಪಡದೆ ಜನರಲ್ಲಿ ಭಕ್ತಿಯ ಬೀಜಬಿತ್ತಿ ಅಜ್ಞಾನದ ಕಡೆ ಜನರು ತೆರಳದಂತೆ ನವ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸಮಾಜ ಸುಧಾರಣೆಗಾಗಿ ಎಲ್ಲಾ ಜಾತಿ ಧರ್ಮಗಳನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ದರು ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ತಾಲ್ಲೂಕು ಅಧ್ಯಕ್ಷ ಪೋಲೀಸ್ ಎಂ.ಎಸ್. ಶಂಕರಪ್ಪ ಮಾತನಾಡಿ, ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದವರು ಬಸವಣ್ಣನವರು. ವಚನಗಳ ಮೂಲಕ ಜ್ಞಾನಭಂಡಾರವನ್ನು ಬಿತ್ತಿ ಶಿಲ್ಪದಂತೆ ಜ್ಞಾನವನ್ನು ಕೆತ್ತಿ ಮನುಕುಲಕ್ಕೆ ಜ್ಞಾನ ಬುತ್ತಿ ತುಂಬಿದರು. ಅವರು ಕೊಟ್ಟ ಜ್ಞಾನ ಮನುಕುಲದ ಸಾಮಾಜಿಕ ಒಗ್ಗಟ್ಟಿಗೆ ಇಂದು ಬುನಾದಿಯಾಗಿದೆ. ವಿಶ್ವಗುರು ಬಸವಣ್ಣನವರ ದಾರಿಯಲ್ಲಿ ಸಾಗಿದರೆ ಸಮಾಜ ಹಾಗೂ ಜೀವನ ಸುಖಕರವಾಗಿರುತ್ತದೆ. ಅವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ್ ಮಾತನಾಡಿ, ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ಯಬೇಕು ಎಂಬ ಮಹಾದಾಸೆ ಬಸವಣ್ಣನವರಲ್ಲಿತ್ತು. ನುಡಿದಂತೆ ನಡೆದು ಯಾವ ಪದವಿಗೂ ಆಸೆ ಪಡದೆ ಜನರಲ್ಲಿ ಭಕ್ತಿಯ ಬೀಜಬಿತ್ತಿ ಶರಣರು ಅಜ್ಞಾನದ ಕಡೆ ತೆರಳದಂತೆ ನವ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ಬಿಡದಿ ರೇಣುಕಪ್ಪ, ಕಾಕೋಳು ಶೈಲೇಶ್ ಮತ್ತು ತಂಡದವರಿಂದ ವಚನ ಗಾಯನ ನಡೆಸಲಾಯಿತು. ಇದೇ ಸಂಧರ್ಭದಲ್ಲಿ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ವೀರಶೈವ ಯುವಕ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಶೇಖರ್, ಜಿಪಂ ಸಹಾಯಕ ಕಾರ್ಯದರ್ಶಿ ಶಿವಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ಮುಖಂಡರಾದ ಎ.ಜೆ. ಸುರೇಶ್, ರುದ್ರದೇವರು, ಸೋಮಶೇಖರ್, ವಿಜಯಕುಮಾರಿ, ಎಂ. ಮಹೇಶ್, ವೇದಮೂರ್ತಿ, ಐಜೂರು ಜಗದೀಶ್, ಅಕ್ಕಮಹಾದೇವಮ್ಮ, ರಾ.ಶಿ. ಬಸವರಾಜು, ಗೀತಾ, ಶಿವಸ್ವಾಮಿ, ಸರಸ್ವತಮ್ಮ, ಶಂಕರ್, ವಿಜಯಕುಮಾರ್, ಶೋಭಾ, ಗಿರಿಜ, ಮಹದೇಶಸ್ವಾಮಿ, ಶಿವಶಂಕರ್, ಶಿವಪ್ರಕಾಶ್, ಮೃತ್ಯುಂಜಯ, ಶಿವಸ್ವಾಮಿ, ಗೌರೀಶ್, ಗುರುಲಿಂಗಯ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿ
ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯ