;Resize=(412,232))
ಬೆಂಗಳೂರು : ನಗರದಲ್ಲಿ ಬೇಸಿಗೆಯ ಧಗೆ ಏರುತ್ತಿದ್ದಂತೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆಬಾವಿ ಅವಲಂಬಿತರು ನೀರಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಜಲಮಂಡಳಿ ನಿರ್ವಹಿಸುವ 11,816 ಬೋರ್‌ವೆಲ್‌ಗಳ ಪೈಕಿ ಈಗಾಗಲೇ ಸುಮಾರು 800ಕ್ಕೂ ಹೆಚ್ಚು ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇನ್ನು ಸಾವಿರಾರು ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದೆ. ಮೇ ಮೂರನೇ ವಾರದವರೆಗೂ ಬಿಸಿಲಿನ ಆರ್ಭಟ ಮುಂದುವರೆಯುವುದರಿಂದ ನೀರಿನ ಸಮಸ್ಯೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.
ಕೊಳವೆಬಾವಿಗಳು ಬತ್ತಿದ ಬೆನ್ನಲ್ಲೇ ಜನರು ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್‌ಗಳು ಹಾಗೂ ಜಲಮಂಡಳಿಯ ‘ಸಂಚಾರಿ ಕಾವೇರಿ’ ನೀರಿನ ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಜಿಬಿಎಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಕೊಳವೆ ಬಾವಿ ನೀರು ಪ್ರಮುಖ ಆಧಾರವಾಗಿದ್ದು, ಸದ್ಯ ಅಲ್ಲಿನ ಜನರಿಗೆ ನೀರಿನ ಬವಣೆ ನೀಗಿಸುವುದೇ ದೊಡ್ಡ ಸವಾಲಾಗಿದೆ.
ಹೊಸದಾಗಿ ಸೇರ್ಪಡೆಯಾದ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರಿನ ಸಂಪರ್ಕವಿದೆ. ಆದರೆ, ಕೊಳವೆ ಬಾವಿ ನೀರಿಗೆ ಹೋಲಿಸಿದರೆ ಕಾವೇರಿ ನೀರಿನ ಶುಲ್ಕ ದುಬಾರಿ ಎನ್ನುವ ಕಾರಣಕ್ಕೆ ನಾಗರಿಕರು ಕಾವೇರಿ ನೀರು ಸಂಪರ್ಕ ಪಡೆಯಲು ಹಿಂಜರಿಯುತ್ತಿದ್ದಾರೆ. ಆದರೆ, ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರು ಬತ್ತುವುದರಿಂದ ಕಾವೇರಿ ಸಂಪರ್ಕ ಪಡೆಯದಿರುವುದು ನಾಗರಿಕರ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ.