ಕನ್ನಡಪ್ರಭ ವಾರ್ತೆ ಹಾಸನ
ನಗರದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಲಾದ ಮೆರವಣಿಗೆಯಲ್ಲಿ ಮೊದಲು ಪೂಜೆ ಸಲ್ಲಿಸಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂಸದರಾದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್. ಪಿ. ಸ್ವರೂಪ್ ಹಾಗೂ ಜಿಲ್ಲಾಧಿಕಾರಿಗಳಾದ ಕೆ. ಎಸ್. ಲತಾಕುಮಾರಿ ಇವರು ಸಮಾಜದವರೊಂದಿಗೆ ರಥ ಎಳೆದು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಂಸದರು, ಬಸವಣ್ಣನವರು ಸಾರಿದ “ಕಾಯಕವೇ ಕೈಲಾಸ” ಮತ್ತು “ದಾಸೋಹ” ಎಂಬ ತತ್ವಗಳು ಸಮಾಜದಲ್ಲಿ ಸಮಾನತೆ ಹಾಗೂ ಪರಸ್ಪರ ಸಹಕಾರದ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು. ಇಂದಿನ ಕಾಲಘಟ್ಟದಲ್ಲಿ ಈ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದ್ದು, ಸಾರ್ವಜನಿಕರು, ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಬಸವಣ್ಣನವರ ಮಾರ್ಗದಲ್ಲಿ ನಡೆಯುವ ಮೂಲಕ ಶರಣರ ಆದರ್ಶಗಳನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಜಾತಿ, ವರ್ಣ, ಧರ್ಮ ಆಧಾರಿತ ಭೇದಭಾವವನ್ನು ನಿವಾರಿಸುವಲ್ಲಿ ಬಸವಣ್ಣನವರ ಚಿಂತನೆಗಳು ಪ್ರಮುಖ ಪಾತ್ರವಹಿಸಿದ್ದವು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಸತ್ಯ, ನೀತಿ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ೧೨ನೇ ಶತಮಾನದಲ್ಲೇ ಅಸಮಾನತೆ, ತಾರತಮ್ಯ ಮತ್ತು ಅನಕ್ಷರತೆ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ ಮಹಾನ್ ಚಿಂತಕ ಎಂದು ತಿಳಿಸಿದರು. ಬಸವಣ್ಣನವರ ತತ್ವಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಎಲ್ಲಾ ವರ್ಗದ ಜನರಿಗೆ ಮಾರ್ಗದರ್ಶಕವಾಗಿವೆ. ಅವರ ಸಂದೇಶಗಳನ್ನು ಯುವಪೀಳಿಗೆ ಅರಿತುಕೊಂಡು ಅನುಸರಿಸುವುದು ಅಗತ್ಯ ಎಂದು ಹೇಳಿದರು. ಬಸವ ಜಯಂತಿಯಂತಹ ಆಚರಣೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಪಿ. ತಾರಾನಾಥ್, ಲಿಂಗಾಯತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ನವಿಲೇ ಪರಮೇಶ್ ಹಾಗೂ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ಜಿಲ್ಲಾ ಘಟಕದ ಅಧ್ಯಕ್ಷೆ ಚಂದ್ರಮತಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಿ.ಎಸ್. ಅವಿನಾಶ್, ಜಿಲ್ಲಾ ವೀರಶೈವ ಲಿಂಗಾಯುತ ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್ ಹೊಸಮನಿ, ಕಾರ್ಯದರ್ಶಿ ಇ. ಎಂ. ರುದ್ರಕುಮಾರ್, ಸಹ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ್, ಸದಸ್ಯರಾದ ಎ.ಜೆ. ಶೋಭನ್ ಬಾಬು, ಎಚ್. ಎನ್. ನಾಗೇಶ್ ಇತರರು ಉಪಸ್ಥಿತರಿದ್ದರು.