- ರಥಕ್ಕೆ ತಹಸೀಲ್ದಾರ್ ಆರ್.ರವಿ ಪೂಜೆ । ಬೀರೇಶ್ವರ ಕಾರ್ಣಿಕ
ಮಲೇಬೆನ್ನೂರು: ಪಟ್ಟಣದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಬಸವೇಶ್ವರ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು. ಸಂಜೆ 5 ಗಂಟೆ ವೇಳೆಗೆ ಬಸವೇಶ್ವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿದ ಬಳಿಕ ಉಪ ತಹಸೀಲ್ದಾರ್ ಆರ್.ರವಿ ರಥಕ್ಕೆ ಪೂಜೆ ನೆರವೇರಿಸಿದರು. ಪಟ್ಟಣದ ಇತರೆ ದೇವರುಗಳ ಹೊತ್ತ ಫಲ್ಲಕ್ಕಿ, ಭೂತಪ್ಪಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿದವು. ಅನಂತರ ನೂರಾರು ಭಕ್ತರು ಭಕ್ತಿಯಿಂದ ಉತ್ತರ ದಿಕ್ಕಿಗೆ ರಥವನ್ನು ಎಳೆಯುತ್ತ ಸಮುದಾಯ ಆರೋಗ್ಯ ಕೇಂದ್ರದವರೆಗೆ ತಂದರು. ಮತ್ತೆ ಅದೇ ದಾರಿಯಲ್ಲಿ ರಥವು ಸಾಗಿ ಹಳೇ ವೃತ್ತದಲ್ಲಿ ತಂದು ನಿಲ್ಲಿಸಲಾಯಿತು. ರಥೋತ್ಸವಕ್ಕೂ ಪೂರ್ವದಲ್ಲಿ ಬೀರೇಶ್ವರ ಕಾರ್ಣಿಕ ನಡೆಯಿತು.
ರಥೋತ್ಸವಕ್ಕೆ ನಾಸಿಕ್ ಡೋಲು, ಭಜನೆ, ಕುದುರೆ ಕುಣಿತ, ಹಲಗೆ ಮತ್ತಿತರೆ ಜಾನಪದ ಕಲಾವಾದ್ಯಗಳು ಮೆರುಗು ನೀಡಿದವು. ರಥ ಚಲಿಸುವಾಗ ಮಕ್ಕಳು ಯುವಕ/ತಿಯರು ಸೇರಿದಂತೆ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ತೋರಿದರು. ಉತ್ಸವದಲ್ಲಿ ವಿವಿಧ ಪಕ್ಷಗಳ ಮುಖಂಡರು ಬಸವೇಶ್ವರ ದೇವರ ದರ್ಶನ ಪಡೆದರು. ಬಸಾಪುರ, ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ನಿಟ್ಟೂರು, ಕುಂಬಳೂರು, ಜಿಗಳಿ, ಬೇವಿನಹಳ್ಳಿ, ಕೊಕ್ಕನೂರು, ಹೊಳೆಸಿರಿಗೆರೆ ಮತ್ತು ಹಲವು ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.ಶಿವಮೊಗ್ಗ- ಹೊನ್ನಾಳಿ ಮುಖ್ಯ ರಸ್ತೆಯಲ್ಲಿ ರಥ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ ಮಾಡಿ ಬೇರೆ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು. ಪರಿಣಾಮ ಕೆಲ ಪ್ರಯಾಣಿಕರು ತೊಂದರೆ ಅನುಭವಿಸಿದರು. ವೃತ್ತ ನಿರೀಕ್ಷಕ ಸುರೇಶ್ ಸಗರಿ, ಉಪನಿರೀಕ್ಷಕ ಅರೂನ್ ಅಕ್ತರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಬಳಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
- - --ಚಿತ್ರ-೧: ಭಕ್ತಸಾಗರದ ಮಧ್ಯೆ ಬಸವೇಶ್ವರ ರಥೋತ್ಸವ ನಡೆಯಿತು.