ಅಡಕೆ ಕ್ಯಾನ್ಸರ್‌ಕಾರಕ ಎಂಬುದು ಆಧಾರರಹಿತ ವರದಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Nov 20, 2024, 12:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಈಗಾಗಲೇ ಕ್ಯಾಂಪ್ಕೋ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳು ಅಡಕೆ ಮೇಲೆ ಸಂಶೋಧನೆಗಳನ್ನು ಕೈಗೊಂಡು, ಅಡಕೆಯು ಕ್ಯಾನ್ಸರ್‌ಕಾರಕವಲ್ಲ ಎಂಬ ವರದಿಯನ್ನು ನೀಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿ: ಅಡಕೆ ಕ್ಯಾನ್ಸರ್‌ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ ವರದಿ ನೀಡಿದ್ದು, ಇದು ಆಧಾರವಿಲ್ಲದೆ ನೀಡಿದ ಅವೈಜ್ಞಾನಿಕವಾದದ್ದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈಗಾಗಲೇ ಕ್ಯಾಂಪ್ಕೋ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳು ಅಡಕೆ ಮೇಲೆ ಸಂಶೋಧನೆಗಳನ್ನು ಕೈಗೊಂಡು, ಅಡಕೆಯು ಕ್ಯಾನ್ಸರ್‌ಕಾರಕವಲ್ಲ ಎಂಬ ವರದಿಯನ್ನು ನೀಡಿದೆ. ಅಲ್ಲದೆ ಔಷಧೀಯ ಗುಣಗಳು ಸಹ ಅಡಕೆಯಲ್ಲಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಇಂತಹ ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಂಗಸಂಸ್ಥೆ ವರದಿ ನೀಡಿರುವುದು ಸಮಂಜಸವೆನಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಷಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಡಬ್ಲ್ಯುಎಚ್‌ಒ ಸಂಸ್ಥೆಗೆ ತಿಳಿಸುವ ಮತ್ತು ಅವರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾವಿರಾರು ವರ್ಷಗಳಿಂದ ಅಡಕೆ ಬಳಕೆಯಲ್ಲಿದ್ದು, ಪೂಜನೀಯ ಸ್ಥಾನದಲ್ಲಿದೆ. ತಂಬಾಕು ಬೇರ್ಪಟ್ಟ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವುದು ಅನೇಕ ಸಂಶೋಧನೆಗಳಿಂದ ಹಾಗೂ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಈ ಅಂಶಗಳನ್ನು ಮತ್ತು ವೈಜ್ಞಾನಿಕ ಸಂಶೋಧನೆಯ ಅಂಶಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗಿದ್ದು, ಈ ವಿಷಯಗಳ ಬಗ್ಗೆ ಸರ್ಕಾರಿ ಮಟ್ಟದಲ್ಲೂ ಗಂಭೀರವಾಗಿ ಪ್ರಯತ್ನಿಸುವಂತೆ ಸಂಬಂಧಪಟ್ಟ ಸಚಿವರಿಗೆ ಹಾಗೂ ಇಲಾಖೆಯ ಮುಖ್ಯಸ್ಥರಿಗೆ ಮನವರಿಕೆ ಮಾಡುವ ಕುರಿತು ಕ್ರಮ ಕೈಗೊಂಡಿದ್ದು, ಇನ್ನುಮುಂದೆ ಸಹ ಈ ಕುರಿತು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ.

ಈಗಾಗಲೇ ಕ್ಯಾಂಪ್ಕೋ ಸೇರಿದಂತೆ ರಾಜ್ಯದ ಪ್ರಮುಖ ಸಹಕಾರಿ ಸಂಘಗಳು ಮತ್ತು ಸಂಶೋಧನಾ ಸಂಸ್ಥೆಗಳು ಅಡಕೆ ಬೆಳೆಗಾರರ ಹಿತರಕ್ಷಣೆ ಕುರಿತಂತೆ ಸಕ್ರಿಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ. ಆಗಾಗ ಅಡಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಇಂತಹ ಷಡ್ಯಂತ್ರಗಳನ್ನು ತಡೆಯಲು ಕೇಂದ್ರ ಹಣಕಾಸು, ವಾಣಿಜ್ಯ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಗತ್ಯವಾದ ಎಲ್ಲ ಕ್ರಮಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ. ರೈತರು ಭಯಭೀತರಾಗುವ ಅಗತ್ಯವಿಲ್ಲ. ಇದಲ್ಲದೇ ದೇಶದಲ್ಲಿಯೇ ಕರ್ನಾಟಕವು ಅತಿಹೆಚ್ಚು ಅಡಕೆ ಬೆಳೆಯುವ ರಾಜ್ಯವಾಗಿದ್ದು, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರ ಎಲ್ಲ ಪ್ರಶ್ನೆಗೆ ಉತ್ತರಿಸಿ: ಸಚಿವರಿಗೆ ಸಿಎಂ ಸಿದ್ದು ಸೂಚನೆ
ಸಂಪುಟ ಪುನಾರಚನೆಗೆ ಹೆಚ್ಚಿದ ಶಾಸಕರ ಒತ್ತಡ