ದಾವಣಗೆರೆ : ಮಧ್ಯ ಕರ್ನಾಟಕದಲ್ಲಿ ಭದ್ರಾ ನೀರಿಗಾಗಿ ಜಟಾಪಟಿ ಮುಂದುವರಿದಿದೆ. ಭದ್ರಾ ಡ್ಯಾಂ ಬಳಿ ಬಲದಂಡೆ ನಾಲೆ ಕಾಮಗಾರಿ ವಿರೋಧಿಸಿ ಶನಿವಾರ ದಾವಣಗೆರೆ ಬಂದ್ ನಡೆಸಲಾಯಿತು. ಯೋಜನೆ ವಿರೋಧಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶನಿವಾರ ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿತ್ತು.
ಬಿಜೆಪಿ ಹಾಗೂ ಜಿಲ್ಲಾ ರೈತರ ಒಕ್ಕೂಟ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವೆಡೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಶಾಲಾ-ಕಾಲೇಜು, ಮೆಡಿಕಲ್ ಶಾಪ್, ಆಸ್ಪತ್ರೆ, ಹಾಲು, ಔಷಧಿ ಅಂಗಡಿಗಳು ಸೇರಿದಂತೆ ತುರ್ತು ಸೇವೆಗೆ ಯಾವುದೇ ವ್ಯತ್ಯಯವಾಗಲಿಲ್ಲ. ಕೆಲ ರಸ್ತೆ, ವೃತ್ತಗಳಲ್ಲಿ ಹಳೆ ಟೈಯರ್‌ಗಳನ್ನು ಸುಟ್ಟು ಪ್ರತಿಭಟಿಸಲಾಯಿತು. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಬಿಜೆಪಿ ಬಂದ್ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ:
ಈ ಮಧ್ಯೆ, ಬಿಜೆಪಿ ಕರೆ ನೀಡಿದ್ದ ಬಂದ್ ವಿರೋಧಿಸಿ ಕಾಂಗ್ರೆಸ್ ಕೂಡ ಪ್ರತಿಭಟನೆ ನಡೆಸಿತು. ನಗರದ ಜಯದೇವ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ರೇಣುಕಾಚಾರ್ಯ ಹಾಗೂ ಮತ್ತಿತರ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಭದ್ರಾ ಕಾಲುವೆ ಕಾಮಗಾರಿಗೆ ಆಗ್ರಹಿಸಿ ಹೊಸದುರ್ಗ ಬಂದ್
ಹೊಸದುರ್ಗ : ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಯೋಜನೆಗೆ ದಾವಣಗೆರೆ ಜಿಲ್ಲೆಯ ರೈತರು ಹಾಗೂ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ದ ಶನಿವಾರ ಕರೆಯಲಾಗಿದ್ದ ಹೊಸದುರ್ಗ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆಯಿಂದಲೇ ತರಕಾರಿ ಮಾರುಕಟ್ಟೆ ಬಂದ್ ಆಗಿತ್ತು. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಖಾಸಗಿ ಬಸ್ ಸೇರಿದಂತೆ ಆಟೋಗಳ ಸಂಚಾರ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ಹೊರವಲಯದಲ್ಲಿ ಸಂಚರಿಸಿದವು.
ಏನಿದು ವಿವಾದ?ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರ ಮಧ್ಯೆ ಭದ್ರಾ ನೀರಿಗಾಗಿ ಜಟಾಪಟಿ ನಡೆಯುತ್ತಿದೆ. ತರೀಕೆರೆ ಬಳಿಯ ಲಕ್ಕವಳ್ಳಿ ಬಳಿ ಭದ್ರಾ ಬಲದಂಡೆ ನಾಲೆ ಸೀಳಿ, ಗ್ರ್ಯಾವಿಟಿ ಮೂಲಕ 30 ಕ್ಯೂಸೆಕ್ ನೀರನ್ನು ಚಿತ್ರದುರ್ಗ ಜಿಲ್ಲೆ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ತಾಲೂಕುಗಳ 568 ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಕಾಮಗಾರಿ ನಡೆದಿದೆ.
ಆದರೆ, ಈ ಕಾಮಗಾರಿಗೆ ದಾವಣಗೆರೆ ಜಿಲ್ಲೆಯ ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತರ ವಿರೋಧವಿದೆ. ಬೇಕಿದ್ದರೆ, ಭದ್ರಾ ಡ್ಯಾಂ ಹಿನ್ನೀರಿನಿಂದ ಅಥವಾ ನದಿಯಿಂದ ನೇರವಾಗಿ ನೀರು ಕೊಡಿ. ಭದ್ರಾ ಡ್ಯಾಂನ ಬಫರ್ ಝೋನ್‌ನ ಬಲದಂಡೆ ನಾಲೆಯನ್ನು ಸೀಳುವುದು ಅವೈಜ್ಞಾನಿಕ. ಈಗ ಕಾಲುವೆ ಸೀಳಿರುವ ಜಾಗ ಎತ್ತರದ ಪ್ರದೇಶದಲ್ಲಿದ್ದು, ಅಲ್ಲಿ ನೀರು ವಿಭಜನೆಯಾದರೆ ಸಹಜವಾಗಿ ಹರಿವಿನ ವೇಗ ಕಡಿಮೆಯಾಗುತ್ತದೆ. ಇದರಿಂದ ಜಿಲ್ಲೆಯ ರೈತರ ಬೆಳೆಗಳಿಗೆ ಸಮರ್ಪಕ ನೀರು ಸಿಗದೆ ಸಮಸ್ಯೆ ಆಗುತ್ತದೆ. ಸೀಳು ಕಾಮಗಾರಿ ಬದಲಿಗೆ ಆಕ್ವಾಡಕ್ಟ್ ಕಟ್ಟಿ ಜಾಕ್‌ವೆಲ್ ಮೂಲಕ ನೀರು ಸರಬರಾಜು ಮಾಡಿದರೂ ಅಡ್ಡಿಯಿಲ್ಲ ಎಂಬುದು ದಾವಣಗೆರೆ ರೈತರ ಆಗ್ರಹ.