ಶಿವಕುಮಾರ ಕುಷ್ಟಗಿ
ಟಿವಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ದೂರವಿದ್ದು, ಕೇವಲ ಓದಿನ ಕಡೆಗೆ ಗಮನ ಹರಿಸಿದ್ದೇ ಇವರ ಯಶಸ್ಸಿನ ರಹದಾರಿಯಾಗಿದೆ. ಗದಗ ತಾಲೂಕಿನ ಒಟ್ಟು 7 ಬಿಸಿಎಂ ಹಾಸ್ಟೆಲ್‌ಗಳ ಫಲಿತಾಂಶವನ್ನು ವಿಶ್ಲೇಷಿಸಿದಾಗ, ಈ ವಿದ್ಯಾರ್ಥಿಗಳು ಶೇ. 91ರಷ್ಟು ಸಾಧನೆ ಮಾಡುವ ಮೂಲಕ ಇಡೀ ಜಿಲ್ಲೆಯ ಗಮನ ಸೆಳೆದಿದ್ದಾರೆ.
300 ವಿದ್ಯಾರ್ಥಿಗಳು: ಗದಗ ತಾಲೂಕಿನಲ್ಲಿರುವ 4 ಬಾಲಕಿಯರ ಮತ್ತು 3 ಬಾಲಕರ ವಸತಿನಿಲಯಗಳಿಂದ ಒಟ್ಟು 300 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಬಾಲಕಿಯರ ವಸತಿನಿಲಯದ ವಿದ್ಯಾರ್ಥಿಗಳು ಶೇ. 92ರಷ್ಟು ಹಾಗೂ ಬಾಲಕರ ವಸತಿನಿಲಯದ ವಿದ್ಯಾರ್ಥಿಗಳು ಶೇ. 87ರಷ್ಟು ಸಾಧನೆ ಮಾಡಿದ್ದಾರೆ.ವಿಶೇಷವೆಂದರೆ ಪರೀಕ್ಷೆ ಬರೆದವರಲ್ಲಿ 42 ವಿದ್ಯಾರ್ಥಿಗಳು ಶೇ. 90ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದರೆ, 79 ವಿದ್ಯಾರ್ಥಿಗಳು ಶೇ. 85ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಹಾತಲಗೇರಿ ಗ್ರಾಮದ ಕರಿಯಪ್ಪ ಕುರಬರ ಹಾಗೂ ವಾಣಿಜ್ಯ ವಿಭಾಗದಲ್ಲಿ ವಿನೋದ ಕುಡಗಿ ಶೇ. 95.83 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಹಂಚಿಕೊಂಡರೆ, ಗಾಯತ್ರಿ ಅರೇರ ಅವರು ಶೇ. 95.67 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ವಸತಿ ನಿಲಯದ ಗೌರವ ಹೆಚ್ಚಿಸಿದ್ದಾರೆ.
ಬೆಳಗ್ಗೆ ಬೇಗ ಎದ್ದು ಓದುವುದು, ನಿಗದಿತ ಸಮಯದಲ್ಲಿ ತರಗತಿಗಳಿಗೆ ಹಾಜರಾಗುವುದು ಹಾಗೂ ಸಂಜೆ ಕಡ್ಡಾಯವಾಗಿ ನಡೆಯುವ ಸ್ಟಡಿ ಅವರ್‌ಗಳು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿವೆ. ಅಲ್ಲದೆ, ಇಲ್ಲಿನ ಸ್ಪರ್ಧಾತ್ಮಕ ವಾತಾವರಣವು ಒಬ್ಬ ವಿದ್ಯಾರ್ಥಿಯ ಸಾಧನೆಯನ್ನು ನೋಡಿ ಮತ್ತೊಬ್ಬರು ಸ್ಫೂರ್ತಿ ಪಡೆಯಲು ವೇದಿಕೆಯಾಗಿದೆ. ಬಹುತೇಕ ಹಾಸ್ಟೆಲ್‌ಗಳಲ್ಲಿ ಅಧ್ಯಯನ ಕೊಠಡಿಗಳು, ಗ್ರಂಥಾಲಯದ ಸೌಲಭ್ಯ ಹಾಗೂ ಮಾರ್ಗದರ್ಶನ ನೀಡುವ ಮೇಲ್ವಿಚಾರಕರ ಕಾಳಜಿಯಿಂದಾಗಿ ಗ್ರಾಮೀಣ ಭಾಗದ ಬಡ ಪ್ರತಿಭೆಗಳು ರಾಜ್ಯ ಮಟ್ಟದ ಟಾಪರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತಾಗಿದೆ.ಶಿಸ್ತಿನ ಅಧ್ಯಯನ...
ಅಗತ್ಯ ಕ್ರಮ: ಹಾಸ್ಟೆಲ್‌ಗಳಲ್ಲಿ ನಿರ್ಮಾಣವಾಗುವ ಶಿಸ್ತುಬದ್ಧ ವಾತಾವರಣ ಮತ್ತು ಆರೋಗ್ಯಕರ ಸ್ಪರ್ಧೆಯೇ ಈ ಸಾಧನೆಗೆ ಪೂರಕವಾಗಿದೆ. ಇಲ್ಲಿ ಒಬ್ಬ ವಿದ್ಯಾರ್ಥಿಯ ಯಶಸ್ಸು ಮತ್ತೊಬ್ಬರಿಗೆ ಸ್ಫೂರ್ತಿ ನೀಡುತ್ತದೆ. ಬೆಳಗ್ಗೆ ಮತ್ತು ಸಂಜೆಯ ಕಡ್ಡಾಯ ಸ್ಟಡಿ ಅವರ್‌ಗಳು ಹಾಗೂ ಮೊಬೈಲ್, ಟಿವಿಗಳಂತಹ ವ್ಯತ್ಯಯಗಳಿಲ್ಲದ ಓದು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸಿವೆ. ಮುಂದಿನ ದಿನಗಳಲ್ಲೂ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ತರಲು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.