ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸೋಮವಾರ ನಡೆದ ನಗರಸಭೆ ಕೌನ್ಸಿಲ್ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಜೆ.ಶಶಿಧರ್ ಸಲ್ಲಿಸಿದ ಮನವಿ ಚರ್ಚೆಗೆ ಎತ್ತಿಕೊಂಡ ಸದಸ್ಯರು ಒಕ್ಕೊರಲಿನಿಂದ ಅನುಮೋದಿಸಿದರು. ಚಳ್ಳಕೆರೆ ಟೋಲ್‌ಗೇಟ್‌ನಿಂದ ಜಿಎಂಐಟಿ ವರೆಗಿನ ಸುಮಾರು 2 ಕಿ.ಮೀ ಗೂ ಹೆಚ್ಚು ಉದ್ದದ ರಸ್ತೆ ಇದಾಗಿದೆ.
ಸದಸ್ಯರು ಗಾಂಧಿ ವೃತ್ತಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಬೇಕೆಂಬ ಮತ್ತೊಂದು ಪ್ರಸ್ತಾಪಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.ಸದಸ್ಯ ಗೊಪ್ಪೆ ಮಂಜುನಾಥ್ ಮಾತನಾಡಿ, ಅನಾದಿ ಕಾಲದಿಂದಲೂ ಆ ವೃತ್ತಕ್ಕೆ ಗಾಂಧಿ ಹೆಸರು ನಾಮಕರಣ ಮಾಡಲಾಗಿದೆ. ಆದ್ದರಿಂದ ಗಾಂಧೀಜಿ ಹೆಸರು ಬದಲಾಯಿಸುವುದು ಸೂಕ್ತವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಗುರುವಾಗಿದ್ದು ವೃತ್ತಕ್ಕೆ ನಾಮಕರಣ ಮಾಡುವುದು ಬೇಡವೆಂದಾಗ ಸದಸ್ಯರು ಪ್ರಧಾನಿ ಹೆಸರು ರಸ್ತೆಗೆ ಸೀಮಿತಗೊಳಿಸಿದರು.
ಜಿಲ್ಲಾಧಿಕಾರಿ ಮನೆ ಮುಂಭಾಗದ ಮೂರು ದಾರಿ ಕೂಡುವ ಜಾಗಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ವೃತ್ತ, ಬಸವ ಮಂಟಪ ಮುಂಭಾಗದ ಬಸ್ ಏಜೆಂಟ್ ಸೋಮಣ್ಣನ ಮನೆ ಮುಂಭಾಗದ ವೃತ್ತಕ್ಕೆ ಮಹರ್ಷಿ ಸವಿತ ವೃತ್ತ, ದೊರೆಸ್ವಾಮಿ ಲೇ ಔಟ್ ಪಕ್ಕದ ವೃತ್ತಕ್ಕೆ ದಲಿತ ಹಾಗೂ ನೀರಾವರಿ ಹೋರಾಟಗಾರ ಎಂ.ಜಯಣ್ಣ ಹೆಸರು ನಾಮಕರಣ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.
ಏಕನಾಥೇಶ್ವರಿ ಪಾದಗುಡಿಯ ಮುಂಭಾಗದ ವೃತ್ತಕ್ಕೆ ಹಗಲು ಕಗ್ಗೊಲೆ ಮಾನ್ಯ, ರಾಜಾ ಮತ್ತಿ ತಿಮ್ಮಣ್ಣನಾಯಕ ವೃತ್ತ ಎಂದು ಹಾಗೂ ಹಳೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಟ್ರಕ್ ಟರ್ಮಿನಲ್ ಸಮೀಪದ ಚತುರ್ಭುಜ ವೃತಕ್ಕೆ ಮಡಿವಾಳ ಮಾಚಿದೇವ ವೃತ್ತ ಎಂದು ನಾಮಕರಣ ಮಾಡಲು ಸಭೆ ನಿರ್ಣಯಿಸಿತು. ಮನೋಹರ ಪ್ರಾವಿಜನ್ ಸ್ಟೋರ್ ನಿಂದ ಸಿಕೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರೆಗಿನ ಮುಖ್ಯ ರಸ್ತೆಗೆ ಬಿಚ್ಚುಗತ್ತಿ ಭರಮಣ್ಣನಾಯಕ ಹೆಸರು ನಾಮಕರಣಕ್ಕೆ ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿತು.
ಗಾಂಧಿ ವೃತ್ತದ ಬಳಿಯ ದರ್ಗಾ ಪಕ್ಕದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡದ ಬಗ್ಗೆ ಕನ್ನಡಪ್ರಭದ ವರದಿಯ ಸಭೆಯಲ್ಲಿ ಸದಸ್ಯ ಶ್ರೀನಿವಾಸ್ ಪ್ರಸ್ತಾಪಿಸಿದರು. ಈ ಬಗ್ಗೆ ನೋಟೀಸು ಜಾರಿ ದಾಖಲಾತಿ ಕೇಳಲಾಗಿದೆ.ಕಟ್ಟಡ ನಿರ್ಮಿಸಲು ಅನುಮತಿ ಪಡೆಯಲಾಗಿಲ್ಲವೆಂದು ಪೌರಾಯುಕ್ತೆ ರೇಣುಕಾ ಸ್ಪಷ್ಟನೆ ನೀಡಿದರು.