ಆರು ಹೊಸ ಬಡಾವಣೆಗಳ ನಿರ್ಮಿಸಲು ಬಿಡಿಎ ಸಿದ್ಧತೆ

KannadaprabhaNewsNetwork |  
Published : Aug 29, 2025, 02:00 AM ISTUpdated : Aug 29, 2025, 10:08 AM IST
BDA

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌(ಪಿಆರ್‌ಆರ್‌-2) ಸುತ್ತ ಹೊಸದಾಗಿ ಆರು ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಇದಕ್ಕಾಗಿ 6,217.388 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರ ಅನುಮೋದನೆ ನೀಡಿದೆ.

  ಬೆಂಗಳೂರು :  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌(ಪಿಆರ್‌ಆರ್‌-2) ಸುತ್ತ ಹೊಸದಾಗಿ ಆರು ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಇದಕ್ಕಾಗಿ 6,217.388 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರ ಅನುಮೋದನೆ ನೀಡಿದೆ.

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ಪಿಆರ್‌ಆರ್‌-2ಕ್ಕೆ ಹೊಂದಿಕೊಂಡಂತೆ ಆರು ಬಡಾವಣೆಗಳನ್ನು ಒಟ್ಟು 6,217.388 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಿದೆ. ಬಡಾವಣೆಗಳ ನಿರ್ಮಾಣಕ್ಕೆ ಭೂಮಿ ಕೊಡುವ ಭೂ ಮಾಲೀಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನ ಅಥವಾ ನಗದು ಪರಿಹಾರ ನೀಡಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಆರು ಹೊಸ ಬಡಾವಣೆಗಳಿಗಾಗಿ 22 ಗ್ರಾಮಗಳ ಸರ್ವೆ ನಂಬರ್‌ಗಳನ್ನು ಗುರುತಿಸಿದ್ದು 50 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಹಾಗೆಯೇ ಈ ಬಡಾವಣೆಗಳ ನಡುವೆಯೇ 100 ಮೀಟರ್‌ ಅಗಲದ ಪಿಆರ್‌ಆರ್‌-2 ನಿರ್ಮಿಸಲು ಉದ್ದೇಶಿಸಲಾಗಿದ್ದು ಸಂಪರ್ಕ ರಸ್ತೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚು ಪ್ರಾಮುಖ್ಯತೆ ಸಿಗಲಿದೆ. ಕೆಂಪೇಗೌಡ ಬಡಾವಣೆ ಮತ್ತು ಶಿವರಾಮ ಕಾರಂತ ಬಡಾವಣೆಗಳ ನಿರ್ಮಾಣದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಯೋಜನಾಬದ್ಧವಾಗಿ ಬಡಾವಣೆ ರಚಿಸಲು ಬಿಡಿಎ ಸಿದ್ಧತೆ ನಡೆಸಿದೆ.

ಮುಖ್ಯವಾಗಿ ಜನರಿಗೆ ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಪರಿಹಾರ ವಿತರಣೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಮತ್ತು ಭೂಸ್ವಾಧೀನಕ್ಕೆ ಕಾನೂನಾತ್ಮಕ ಸಮಸ್ಯೆಗಳು ಬರದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು, ಭೂಮಾಲೀಕರ ಮನವೊಲಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆಯೂ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಾಧಿಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಿ, ಎಷ್ಟು ಎಕರೆ?

ಮಾರಗೊಂಡನಹಳ್ಳಿ 84.23 ಎಕರೆ, ಹುಲಿಮಂಗಲ, ಬೆಟ್ಟದಾಸನಪುರ, ಎಸ್‌.ಬಿಂಗೀಪುರ 516.21 ಎಕರೆ, ಹುಲ್ಲಹಳ್ಳಿ 216.20 ಎಕರೆ, ಬೇಗೂರು, ಹೊಮ್ಮದೇವನಹಳ್ಳಿ, ಕಮ್ಮನಹಳ್ಳಿ, ಮೈಲಸಂದ್ರ, ಎಲ್ಲೇನಹಳ್ಳಿ, ಹುಲ್ಲಳ್ಳಿ 510 ಎಕರೆ, ಬಿ.ಎಂ.ಕಾವಲ್‌, ಕಗ್ಗಲೀಪುರ, ಯು.ಎಂ.ಕಾವಲ್‌, ಅಗರ, ಗುಳಕಮಲೈ, ಒ.ಬಿ.ಚೂಡನಹಳ್ಳಿ, ಉತ್ತರಿ 4206.29 ಎಕರೆ, ಬಿ.ಎಂ.ಕಾವಲ್‌, ದೇವಗೆರೆ, ಗಂಗಸಂದ್ರ, ಗುಡಿಮಾವು 652.30 ಸೇರಿದಂತೆ ಒಟ್ಟು 6217.388 ಎಕರೆ ಭೂಮಿಯಲ್ಲಿ ಆರು ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮುಂದುವರಿದ ಲೇಔಟ್‌ಗೂ ಈ ಹೊಸ ಆರು ಬಡಾವಣೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಡಿಎ ಮೂಲಗಳು ತಿಳಿಸಿವೆ.

PREV
Read more Articles on

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’