ಬಿಡಿಸಿಸಿ ಬ್ಯಾಂಕ್‌ ಠೇವಣಿ ಹಣ ಭದ್ರವಾಗಿದೆ

KannadaprabhaNewsNetwork |  
Published : Feb 10, 2026, 03:15 AM IST
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬಿಡಿಸಿಸಿ ಬ್ಯಾಂಕ್‌ ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಡಿಸಿಸಿ ಬ್ಯಾಂಕ್‌ ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಂಕ್‌ ಠೇವಣಿ ವಿಚಾರದಲ್ಲಿ ಡಾ.ಮಹಾಂತೇಶ ಕಡಾಡಿ ಹಾಗೂ ಮಾಜಿ ಅಧ್ಯಕ್ಷ ರಮೇಶ ಕತ್ತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಡಾಡಿ ಅವರಿಗೆ ನೋಟಿಸ್ ನೀಡಲಾಗಿದ್ದು, ರಮೇಶ ಕತ್ತಿ ಮಿತಿಮೀರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ನಮ್ಮ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಈಗ ಮೂರು ತಿಂಗಳಾಗಿದೆ. ಈ ಮೂರು ತಿಂಗಳಲ್ಲಿ ₹ 500 ಕೋಟಿ ಠೇವಣಿ ಸಂಗ್ರಹವಾಗಿದೆ. ಬ್ಯಾಂಕ್‌ನಲ್ಲಿ ಸುಮಾರು ₹5,575 ಕೋಟಿ ಠೇವಣಿಯಿದ್ದು, ರೈತರಿಗೆ ಕೃಷಿ ಸಾಲವಾಗಿ ₹3,710 ಕೋಟಿ ಹಾಗೂ ಕೃಷಿಯೇತರ ಸಾಲವಾಗಿ ₹127 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಎಕರೆಗೆ ₹ 40 ಸಾವಿರ ಸಾಲಸೌಲಭ್ಯ ನೀಡಲಾಗುತ್ತಿದೆ. ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳಿಗೂ ಶೇ. 8.8 ರಷ್ಟು ಬಡ್ಡಿದರದ ಆಧಾರದ ಮೇಲೆ ಸಾಲ ನೀಡಲಾಗುತ್ತಿದೆ. ಆದರೆ, ಬ್ಯಾಂಕ್‌ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲೆಂದೇ ಸ್ಪಷ್ಟೀಕರಣ ನೀಡುತ್ತಿದ್ದೇವೆ. ರೈತರು ಯಾವುದೇ ಆಂತಕ ಪಡುವ ಅಗತ್ಯ ಇಲ್ಲ. ಬ್ಯಾಂಕ್‌ನಲ್ಲಿ ಠೇವಣಿ ಹಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದರು.

ಜಯಶೀಲ ಶೆಟ್ಟಿ ಎಂಬುವರು ಬ್ಯಾಂಕ್‌ನಲ್ಲಿ ತಮ್ಮ ಬೆಳಗಾವಿಯ 4 ಎಕರೆ ಕೃಷಿಯೇತರ ಜಮೀನಿನ ಮೇಲೆ ಸಾಲ ಪಡೆದಿದ್ದು, ಅದಕ್ಕಾಗಿ ಅವರು ₹ 8 ಕೋಟಿ ಬಡ್ಡಿ ಪಾವತಿಸಿದ್ದಾರೆ. ನಮ್ಮ ದುಡ್ಡು ಸುರಕ್ಷಿತವಾಗಿದೆ. ಸಾಲಸೌಲಭ್ಯ ಪಡೆದವರೂ ನಿಗದಿತ ವೇಳೆಗೆ ಬಡ್ಡಿಯನ್ನು ಪಾವತಿಸುತ್ತಿದ್ದಾರೆ ಎಂದರು.

ಶೂನ್ಯ ದರದ ಸಾಲ ಸೌಲಭ್ಯದ ಹಣವನ್ನು ಪರಿಷ್ಕರಿಸುವಂತೆ ರೈತಪರ ಸಂಘಟನೆಗಳು ಮನವಿ ಸಲ್ಲಿಸಿವೆ. ಆದರೆ, ನಬಾರ್ಡ್‌ ಮಾರ್ಗಸೂಚಿಯಂತೆ ಸಾಲ ಸೌಲಭ್ಯವನ್ನು ರೈತರಿಗೆ ನೀಡಲಾಗುತ್ತಿದೆ. ಅಲ್ಲದೇ, ಸಾಲ ನೀಡುವ ವಿಚಾರದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ತಾಂತ್ರಿಕ ಕಮಿಟಿ ತೀರ್ಮಾನ ಮಾಡಬೇಕಾಗುತ್ತದೆ. ರೈತರ ಸಾಲ ಸೌಲಭ್ಯದ ವಿಚಾರದಲ್ಲಿಯೂ ತಪ್ಪು ಮಾಹಿತಿ ಮೂಡಿಸಲಾಗಿದೆ. ಬ್ಯಾಂಕ್‌ ವತಿಯಿಂದ ಸೊಸೈಟಿ ಕಾರ್ಯದರ್ಶಿ ಮತ್ತು ಸಿಬ್ಬಂದಿಗೆ ಆರೋಗ್ಯ ವಿಮೆಯನ್ನು ನೀಡಲಾಗುವುದು. ಜಿಲ್ಲೆಯ 1200 ಸೊಸೈಟಿ ಶಾಖೆಗಳ ಮೂಲಕ ರೈತರಿಗೆ ಶೂನ್ಯ ದರದ ಸಾಲ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಸಾಲಸೌಲಭ್ಯ ನೀಡಲಾಗುವುದು. ರಾಜ್ಯದಲ್ಲಿ ಅತೀ ಹೆಚ್ಚು 4.75 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದ ಮೇಲೆ ಸೌಲ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಾನು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿಕೆ ನೀಡಿರುವ ರಮೇಶ ಕತ್ತಿ ಅವರು ಆತ್ಮ ಸಾಕ್ಷಿಯಾಗಿ ಹೇಳಿಕೆ ನೀಡಬೇಕು ಎಂದು ಅಣ್ಣಾಸಾಹೇಬ ಜೊಲ್ಲೆ ಆಗ್ರಹಿಸಿದರು.-----------

ಬಾಕ್ಸ್‌....

ಠೇವಣಿ ವಿವಾದದ ಬಗ್ಗೆ ಚರ್ಚೆಗೆ ಬರಲಿ: ಬಾಲಚಂದ್ರ ಜಾರಕಿಹೊಳಿ ಸವಾಲು

ಬೆಳಗಾವಿ: ಬಿಡಿಸಿಸಿ ಬ್ಯಾಂಕ್‌ನ ಠೇವಣಿ ವಿಚಾರದಲ್ಲಿ ಡಾ.ಮಹಾಂತೇಶ ಕಡಾಡಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ತಪ್ಪು ಮಾಹಿತಿ ನೀಡುತ್ತಿದ್ದು, ಅಂಕಿ-ಸಂಖ್ಯೆಯನ್ನು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಬೆಮೂಲ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಸುದೀರ್ಘ ಚರ್ಚೆಗೆ ಸಿದ್ಧವಾಗಿದ್ದು, ರಮೇಶ ಕತ್ತಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ₹160 ಕೋಟಿ ಸಾಲ ನೀಡಲಾಗಿದೆ. ಅದರಲ್ಲಿ ₹80 ಕೋಟಿ ಕೊಲ್ಲಾಪುರದಿಂದ ಹಾಗೂ ₹80 ಕೋಟಿ ನಮ್ಮ ಬ್ಯಾಂಕ್‌ನಿಂದ ನೀಡಲಾಗಿದೆ. ಸುಮಾರು ₹300 ಕೋಟಿ ಮೌಲ್ಯದ ಆಸ್ತಿಯನ್ನು ಪ್ಲೆಜ್‌ ಮಾಡಿಕೊಂಡಿದ್ದು, ಲಕ್ಷ್ಮೀ ನಾರಾಯಣ ಅವರಿಗೆ ಸೇರಿದ 432 ಎಕರೆ ಜಮೀನು ಮತ್ತು ₹ 232 ಕೋಟಿ ಮೌಲ್ಯದ ಪ್ಲಾಂಟೇಷನ್‌ ಸೇರಿದಂತೆ ಭದ್ರತೆ ಪಡೆದಿದ್ದೇವೆ. ನಾವು ₹ 80 ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಕೆಲವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದು, ಬ್ಯಾಂಕ್‌ಗೆ ಸಾಲ ಕೊಡಬೇಡಿ, ಬ್ಯಾಂಕ್‌ಗೆ ಕೀಲಿ ಹಾಕಿ ಎನ್ನುವಂತ ಹೇಳಿಕೆ ನೀಡುತ್ತಿದ್ದಾರೆ. ಬ್ಯಾಂಕ್ ದಿವಾಳಿ ಆಗಬೇಕೆಂಬ ಉದ್ದೇಶದಿಂದ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ 5 ವರ್ಷದ ಅವಧಿಯಲ್ಲಿ ಬ್ಯಾಂಕ್‌ನ್ನು ₹10 ಸಾವಿರ ಕೋಟಿ ವ್ಯವಹಾರ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಮ್ಮ ವಿರೋಧಿಗಳು ಮುಂದಿನ 15 ವರ್ಷ ಬ್ಯಾಂಕ್ ಸಮೀಪ ಬರದಂತೆ ನೋಡಿಕೊಳ್ಳುತ್ತೇವೆ. ಬ್ಯಾಂಕ್‌ ಠೇವಣಿ ಹಣವನ್ನು ಶೇ.12 ಇಲ್ಲವೇ 13ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ರಮೇಶ ಕತ್ತಿ ಹಾಗೂ ಸವದಿ ತಮ್ಮ ಬ್ಯಾಂಕ್‌ ಮೂಲಕ ಸಾಲ ಪಡೆದಿದ್ದಾರೆ. ಬ್ಯಾಂಕ್‌ ಉತ್ತಮ ಆಡಳಿತದಲ್ಲಿ ನಡೆಯುತ್ತಿದ್ದು, ಆರೋಪಗಳಿದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಬಾಲಚಂದ್ರ ಜಾರಕಿಹೊಳಿ ಎಂದು ಆಹ್ವಾನ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಜು ಕಾಗೆ, ನಿರ್ದೇಶಕರಾದ ಚನ್ನರಾಜ ಹಟ್ಟಿಹೊಳಿ, ರಾಹುಲ ಜಾರಕಿಹೊಳಿ, ಅಪ್ಪಾಸಾಹೇಬ ಕುಲಗೂಡೆ, ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀರಾವರಿಗಾಗಿ ಗುರ್ಲಾಪುರ ಮಾದರಿ ಹೋರಾಟ
ಬ್ರಹ್ಮಾಂಡವನ್ನೇ ತೂಗುವ ಶಕ್ತಿವಂತನೇ ಜ್ಞಾನಿ: ಲಿಂಗರಾಜ ಮಹಾರಾಜರ