ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಈ ಒಂದು ವರ್ಷದಲ್ಲಿ ₹ 33.11 ಕೋಟಿ ನಿವ್ವಳ ಲಾಭ ಹಾಗೂ₹ 303 ಕೋಟಿ ಶೇರು ಬಂಡವಾಳ ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅತಿ ಹೆಚ್ಚಿನ ಲಾಭ ಗಳಿಸುವ ಮೂಲಕ ರೈತರು ಹಾಗೂ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ 5 ತಿಂಗಳ ಅವಧಿಯಲ್ಲಿಯೂ ಹೆಚ್ಚಿನ ಅಭಿವೃದ್ಧಿ ಕಂಡು ಬಂದಿದೆ ಎಂದು ತಿಳಿಸಿದರು.ನಿಧಿಗಳು ₹375.9 ಕೋಟಿ, ಠೇವುಗಳು ₹6087 ಕೋಟಿ, ಹೊರಗಿನ ಸಾಲ ₹1664 ಕೋಟಿ, ಗುಂತಾವಣೆಗಳು ₹2276 ಕೋಟಿ, ಸದಸ್ಯರ ಸಾಲಗಳು ₹5893 ಕೋಟಿ, ನಿವ್ವಳ ಲಾಭ ₹33.11 ಕೋಟಿ, ದುಡಿಯುವ ಬಂಡವಾಳ ₹8593 ಕೋಟಿ, ಗ್ರಾಸ್ ಎನ್‌ಪಿಎ ಶೇ.2.07ರಷ್ಟು ಇದೆ ಎಂದು ವಿವರಿಸಿದರು.
ಬ್ಯಾಂಕಿನ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ರಾಜ್ಯದಲ್ಲಿಯೇ ರೈತರಿಗೆ ಅತಿ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆಗೆ ಬಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ. ಪ್ರಸ್ತುತ ಯೋಜನೆಯಡಿಯಲ್ಲಿ ₹3175 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಿಸುವ ಗುರಿ ನೀಡಲಾಗಿತ್ತು. ಆದರೆ, ನಮ್ಮ ಬ್ಯಾಂಕ್ ಜಿಲ್ಲೆಯ 4,88,379 ರೈತ ಸದಸ್ಯರಿಗೆ ₹3475.66 ಕೋಟಿ ಸಾಲ ವಿತರಿಸಿ ಶೇ.109.47ರಷ್ಟು ಸಾಧನೆ ಮಾಡಿ, ಗುರಿ ಮೀರಿ ಸಾಧನೆ ಮಾಡಿದೆ. ಕಳೆದ ವರ್ಷ 4,68,775 ರೈತ ಸದಸ್ಯರಿಗೆ ₹3060.42 ಕೋಟಿ ಹಂಚಲಾಗಿತ್ತು. ಈ ವರ್ಷ 19,604 ಹೊಸ ಸದಸ್ಯರಿಗೆ ಸಾಲ ನೀಡಲಾಗಿದೆ. ₹415.24 ಕೋಟಿ ಬೆಳೆ ಸಾಲವನ್ನು ಹೆಚ್ಚಿಗೆ ನೀಡಲಾಗಿದೆ ಎಂದರು.
ನಬಾರ್ಡ್ ಸಂಸ್ಥೆಯವರು ಪುನರ್‌ಧನ ಸಾಲ ಯೋಜನೆಯಡಿಯಲ್ಲಿ ನಮ್ಮ ಬ್ಯಾಂಕ್ ₹1270 ಕೋಟಿ (60:40) ಆರ್ಹತೆ ಹೊಂದಿದರೂ ಕಳೆದ ವರ್ಷ ₹774 ಕೋಟಿ ಮಾತ್ರ ನೀಡಿದ್ದರು. ಆದರೆ, ಕಳೆದ ವರ್ಷಕ್ಕಿಂತ ₹313 ಕೋಟಿ ಕಡಿಮೆ ನೀಡಿದರೂ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಸಲುವಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ₹415.24 ಕೋಟಿ ಹೆಚ್ಚಿಗೆ ಬೆಳೆ ಸಾಲ ವಿತರಿಸಲಾಗಿದೆ. ಈ ಸಾಲದ ವಸೂಲಿ ಪ್ರಮಾಣ ಶೇ.99.22 ರಷ್ಟಿದೆ. ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಸಾಲ ನೀಡಿದ ಬ್ಯಾಂಕ್ ನಮ್ಮದಾಗಿದೆ ಎಂದು ತಿಳಿಸಿದರು.ಮಾಧ್ಯಮವಾಧಿ ಸಾಲ ವಿತರಣೆ:
ಜಿಲ್ಲೆಯ ರೈತರಿಗೆ ಅನುಕೂಲವಾಗುವ ಸಲುವಾಗಿ ಶೇ.3ರ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್, ಟ್ರೇಲರ್, ಕೃಷಿ ಉಪಕರಣಗಳ ಖರೀದಿಗಾಗಿ, ನೀರಾವರಿ ಪೈಪ್‌ಲೈನ್ ಮಾಡಿಸಲು ಮತ್ತು ಪಂಪ್‌ಸೆಟ್ ಖರೀದಿಗೆ ₹15 ಲಕ್ಷ ವರೆಗೆ ಸಾಲ ನೀಡಲಾಗುತ್ತಿದೆ. ಟ್ರ್ಯಾಕ್ಟರ್ ಖರೀದಿಸಲು 2014 ರೈತ ಸದಸ್ಯರಿಗೆ ₹161.48 ಕೋಟಿ , ಪೈಪ್‌ಲೈನ್‌ಗಾಗಿ 378 ರೈತ ಸದಸ್ಯರಿಗೆ ₹1790 ಕೋಟಿ , ಹೈನುಗಾರಿಕೆಗೆ 609 ರೈತರಿಗೆ ₹3.64 ಕೋಟಿ ಸಾಲ ವಿತರಿಸಲಾಗಿದೆ. ಶೇ.99.78ರಷ್ಟು ಸಾಲ ವಸೂಲಾತಿ ಪ್ರಮಾಣ ಇದೆ ಎಂದರು.ಜಿಲ್ಲೆಯ ರೈತರು, ಸಹಕಾರಿ ಸಂಸ್ಥೆಗಳು, ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸದಿಂದ ಈ ವರ್ಷ ₹6087 ಕೋಟಿ ಠೇವು ಸಂಗ್ರಹಿಸಿದ್ದು, ಈ ವರ್ಷ ₹290 ಕೋಟಿ ಠೇವಿನಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ದುಡಿಯುವ ಬಂಡವಾಳದಲ್ಲಿ ಶೇ.8.84ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ₹30.57 ಕೋಟಿ ಲಾಭ ಹೊಂದಿದ್ದು, ಈ ವರ್ಷ ₹33.11 ಕೋಟಿ ಲಾಭ ಹೊಂದಿದೆ ಎಂದು ತಿಳಿಸಿದರು. ಸಕ್ಕರೆ ಕಾರ್ಖಾನೆಗಳಿಂದ ಸಾಲ ವಿತರಣೆ:
ಬಿಡಿಸಿಸಿ ಬ್ಯಾಂಕಿನಿಂದ 8 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಮತ್ತು 15 ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಒಟ್ಟು ₹1486.96 ಕೋಟಿ ಸಾಲ ವಿತರಿಸಿದ್ದು, ಇದರ ಪೈಕಿ ದುಡಿಯುವ ಬಂಡವಾಳ ಸಾಲ ₹877.15 ಕೋಟಿ ಮತ್ತು ಅವಧಿ ಸಾಲ ₹608.91 ಕೋಟಿ ಸಾಲ ವಿತರಿಸಿದೆ. ಪೈಕಿ ಕಂತು ₹162.47 ಕೋಟಿ ಬಡ್ಡಿ ₹192.22 ಕೋಟಿ ಪ್ರಸ್ತುತ ವರ್ಷ ವಸೂಲಿ ಮಾಡಬೇಕಾಗಿತ್ತು. ಆದರೆ, ಈ ವರ್ಷ ಕಬ್ಬು ನುರಿಸುವ ಪ್ರಮಾಣ ಕಡಿಮೆಯಾದ ಕಾರಣ ವಸೂಲಿ ಕಷ್ಟ ಸಾಧ್ಯವಾಗಿತ್ತು ಎಂದು ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಇದನ್ನು ಮನಗಂಡು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಬ್ಯಾಂಕಿನ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಕಾರ್ಖಾನೆ ಅಧ್ಯಕ್ಷರ, ಅಧಿಕಾರಿಗಳ ಸೌಹಾರ್ದ ಸಭೆ ನಡೆಸಲಾಯಿತು. ಬ್ಯಾಂಕಿನ ಆದಾಯಕ್ಕೆ ಕುಂದು ಬರದಂತೆ ಹಾಗೂ ಕಾರ್ಖಾನೆಗಳಿಗೂ ಅಡಚಣೆಯಾಗದಂತೆ ವಸೂಲಿ ಕಾರ್ಯ ಮಾಡಿರುವುದರಿಂದ ಬ್ಯಾಂಕ್ ಹೆಚ್ಚಿನ ಲಾಭ ಗಳಿಸಿದೆ. ಹೀಗಾಗಿ ಬಡ್ಡಿ ಹಾಗೂ ಅಸಲು ಸಂಪೂರ್ಣವಾಗಿ ವಸೂಲಿಯಾಗಿದೆ.ಯಾವುದೇ ಕಾರ್ಖಾನೆಯ ಕಟಬಾಕಿ ಉಳಿದಿಲ್ಲ ಎಂದು ತಿಳಿಸಿದರು.
ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೊಬೈಲ್ ಬ್ಯಾಂಕಿಂಗ ಸೇವೆಯನ್ನು ಪ್ರಾರಂಭಿಸಲಾಗಿದೆ. ಶೀಘ್ರದಲ್ಲಿ ಐಎಂಪಿಎಸ್, ಯುಪಿಐ, ಗೂಗಲ್ ಪೇ,ಫೋನ್ ಪೇ ಇತ್ಯಾದಿ ಬ್ಯಾಂಕಿನ್ ಆನ್‌ಲೈನ್ ಸೇವೆ ಆರಂಭಿಸಲಾಗುವುದು ಎಂದರು. ಜಿಲ್ಲೆಯಲ್ಲಿ 9 ಶಾಖೆಗಳನ್ನು ಪ್ರಾರಂಭಿಸಲು ಅನುಮತಿ ಪಡೆಯಲಾಗಿದ್ದು, ಶೀಘ್ರದಲ್ಲಿ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ, ಹುದಲಿ, ಬೆಳಗುಂದಿ, ಬೈಲಹೊಂಗಲ ತಾಲೂಕಿನ ನಾಗನೂರ, ಕಿತ್ತೂರ ತಾಲೂಕಿನ ಅಂಬಡಗಟ್ಟಿ ಕಲಬಾಂವಿ, ರಾಯಬಾಗ ತಾಲೂಕಿನ ನಸಲಾಪುರ, ನಿಪನಾಳ, ಖಾನಾಪುರ ತಾಲೂಕಿನ ಕಕ್ಕೇರಿಯಲ್ಲಿ ಬ್ಯಾಂಕಿನ ಶಾಖೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ನಿರ್ದೇಶಕ ಮಹಾಂತೇಶ ದೊಡಗೌಡ್ರ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ₹5 ಲಕ್ಷ ವರೆಗೂ ಸದ್ಯಕ್ಕೆ ಸಾಲ ವಿತರಿಸಲಾಗುತ್ತಿದೆ. ಮತ್ತೆ ಈ ಸಾಲದ ಪ್ರಮಾಣ ಹೆಚ್ಚಸಲಾಗುವುದು. ಈ ವರ್ಷ ಒಟ್ಟು ₹35 ಕೋಟಿ ಸಾಲವನ್ನು 1850 ಸಂಘಗಳಿಗೆ ನೀಡಲಾಗಿದೆ ಎಂದರು.ಬ್ಯಾಂಕಿನ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕರಾದ ಅರವಿಂದ ಪಾಟೀಲ, ಶ್ರೀಕಾಂತ ಧವಣ, ಶಿವಾನಂದ ಡೋಣಿ, ರಾಜೇಂದ್ರ ಅಂಕಲಗಿ, ಪಂಚನಗೌಡ ದ್ಯಾಮನಗೌಡ, ನೀಲಕಂಠ ಕಪ್ಪಲಗುದ್ದಿ, ಗಜಾನನ ಕಳ್ವಿ, ಮುಖ್ಯ ಕಾರ್ಯನಿರ್ವಾಹಕ ಸುರೇಶ್ ಅಳಗುಂಡಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು. ಬ್ಯಾಂಕ್ ಗಟ್ಟಿಯಾಗಿ ಮುನ್ನಡೆದಿದೆ: ಬಾಲಚಂದ್ರ ಜಾರಕಿಹೊಳಿಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಟ್ಟಿಯಾಗಿ ಬ್ಯಾಂಕ್ ಮುನ್ನಡೆದಿದೆ. ಈ ವರ್ಷವೂ ಹೆಚ್ಚಿನ ಆದಾಯ ಗಳಿಸುವ ಮೂಲಕ ಬ್ಯಾಂಕ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ರೈತರಿಗೆ ಅನುಕೂಕವಾಗುವ ದೃಷ್ಟಿಯಿಂದ ಇನ್ನೂ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ ಬ್ಯಾಂಕ್ ನಮ್ಮದಾಗಿದೆ. ವಸೂಲಾತಿಯೂ ಅಷ್ಟೇ ಪ್ರಮಾಣದಲ್ಲಿ ನಡೆದಿದೆ. ಯಾವುದೇ ಕಾರ್ಖಾನೆಯ ಕಟಬಾಕಿ ಉಳಿದಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾರೇ ಇದ್ದರೂ ಬ್ಯಾಂಕ್ ನಿರಂತರವಾಗಿ ಮುನ್ನಡೆಯಲಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ನಿಲ್ಲುವುದಿಲ್ಲ ಎಂದರು. ಜಿಲ್ಲೆಯಲ್ಲಿ ಅನೇಕ ಶಾಸಕರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಬ್ಯಾಂಕಿನ ಒಳಗೆ ಯಾವುದೇ ರಾಜಕಾರಣ ಇಲ್ಲ. ಹೊರಗೆ ಎಷ್ಟೇ ರಾಜಕೀಯ ಜಗಳವಿದ್ದರೂ ಬ್ಯಾಂಕ್ ವಿಷಯ ಬಂದಾಗ ಎಲ್ಲರೂ ಒಂದೇ ರಾಜಕಾರಣವಾದರೆ ರೈತರ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ರಾಜಕೀಯವಿಲ್ಲದೇ ಬ್ಯಾಂಕ್ ಸಾಗಲಿದೆ ಎಂದರು. ನಾನಂತೂ ಬಿಡಿಸಿಸಿ ಚುನಾವಣೆಗೆ ಸ್ಪರ್ದಿಸುವುದಿಲ್ಲ. ಆದರೆ ನಮ್ಮ ಮಾರ್ಗದಶನದಲ್ಲಿಯೇ ಆಡಳಿತ ಮಂಡಳಿ ಗೆಲ್ಲಲಿದೆ. ಅಕ್ಟೋಬರ್‌ನಲ್ಲಿ ನಮ್ಮವರೇ ಅಧ್ಯಕ್ಷ-ಉಪಾಧ್ಯಕ್ಷರಾಗುತ್ತಾರೆ ಎಂದರು.ಬ್ಯಾಂಕ್ ಶತಮಾನೋತ್ಸವದ ಹೊಸ್ತಿಲು ದಾಟಿದರೂ ಕೋವಿಡ್ ಸೇರಿ ವಿವಿಧ ಕಾರಣಗಳಿಂದ ಸಂಭ್ರಮಾಚರಣೆ ಸಾಧ್ಯವಾಗಲಿಲ್ಲ. ಬರುವ ಮೇ ಮಾಸಾಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಶತಮಾನೋತ್ಸವ ಹಿನ್ನೆಲೆಯಲ್ಲಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಕ್ರಮ ವಹಿಸಲಾಗುವುದು. ಠೇವು ಹೆಚ್ಚಿಸಿಕೊಂಡು ಬ್ಯಾಂಕಿನ ಲಾಭ ಅಧಿಕಗೊಳಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಎಲ್ಲ ಶಾಖೆಗಳಿಗೂ ಪೀಠೋಪಕರಣ, ಒಂದೇ ತರಹದ ಸುಣ್ಣ, ಬಣ್ಣ ಸೇರಿ ವಿವಿಧ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.