ಹನೂರು: ಮಲೆಮಹದೇಶ್ವರ ಬೆಟ್ಟದ ಇತಿಹಾಸದಲ್ಲಿಯೇ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 35 ದಿನಗಳ ಅವಧಿಯಲ್ಲಿ ಬರೋಬ್ಬರಿ ₹3.26 ಕೋಟಿ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ, ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ರಾತ್ರಿ10 ಗಂಟೆವರೆಗೂ ನಡೆದ ಹುಂಡಿ ಎಣಿಕೆಯಲ್ಲಿ 3.26 ಕೋಟಿ ರು. ದಾಖಲೆ ಮೊತ್ತ ಮೊದಲ ಬಾರಿಗೆ ಶ್ರೀ ಕ್ಷೇತ್ರದ ಮಾದಪ್ಪನ ಹುಂಡಿಯಲ್ಲಿ ಭಕ್ತರು ಕಾಣಿಕೆ ಹಾಕಿದ್ದಾರೆ.ದಾಖಲೆ ಮೊತ್ತ ಸಂಗ್ರಹ:ಸರ್ಕಾರಿ ರಜಾ ದಿನ, ಪಾದಯಾತ್ರಿಗಳು, ಯುಗಾದಿ ಅಮಾವಾಸ್ಯೆ , ಜಾತ್ರಾ ಮಹೋತ್ಸವ ಸೇರಿದಂತೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ₹3,26,95,339 ನಗದು 47 ಗ್ರಾಂ ಚಿನ್ನ ಹಾಗೂ 2,200 ಗ್ರಾಂ ಬೆಳ್ಳಿ ಪದಾರ್ಥ ಹುಂಡಿಯಲ್ಲಿ ಸಂಗ್ರಹವಾಗಿದೆ. ಇದಲ್ಲದೆ ಇ-ಹುಂಡಿಯಿಂದ ₹59,002, ವಿದೇಶಿ 11 ನೋಟುಗಳು, ಚಲಾವಣೆಯಲ್ಲಿ ಇಲ್ಲದ ₹2000 ಮುಖಬೆಲೆಯ 20 ನೋಟುಗಳು ಹುಂಡಿಯಲ್ಲಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ಗುರು ಮಲ್ಲಯ್ಯ, ಪ್ರಾಧಿಕಾರದ ನಾಮನಿರ್ದೇಶಕ ಸದಸ್ಯರಾದ ಮಹಾದೇವಪ್ಪ, ಮರಿಸ್ವಾಮಿ, ಜಿಲ್ಲಾಡಳಿತ ಕಚೇರಿಯ ಕಲ್ಯಾಣಮ್ಮ, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು, ಪೊಲೀಸ್ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.ಕಳೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ 3 ಕೋಟಿ 18 ಲಕ್ಷ ಇದುವರೆಗಿನ ಹುಂಡಿ ಎಣಿಕೆ ದಾಖಲೆಯ ಮೊತ್ತ ಸಂಗ್ರಹವಾಗಿತ್ತು. ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಹಿನ್ನೆಲೆ ಮಹದೇಶ್ವರ ಬೆಟ್ಟದ ಇತಿಹಾಸದಲ್ಲಿಯೇ ₹3.26 ಕೋಟಿ ದಾಖಲೆ ಮೊತ್ತ ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾಗಿದೆ.ಎ.ಈ ರಘು, ಕಾರ್ಯದರ್ಶಿ, ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ