ಶಿರಸಿ: ಮನಸ್ಸಿನೊಳಗಿನ ಕೊಳೆ ತೊಳೆದು ಎಲ್ಲರೂ ಭಾರತೀಯರು ಎಂದು ಕೆಲಸ ಮಾಡಬೇಕು. ಅಭಿವೃದ್ಧಿಗೆ ಬದ್ಧರಾಗಿರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಬುಧವಾರ ನಗರದ ಬಿಡಕಿಬೈಲಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹಾತ್ಮ ಗಾಂಧೀಜಿ ಅವರ ಆದರ್ಶ ಎಷ್ಟು ಪಾಲಿಸಿದ್ದೇವೆ ಎಂದು ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಅವರು ಕಂಡ ಕನಸು ಎಲ್ಲ ವರ್ಗದವರ ಜತೆಯಲ್ಲಿ ಒಂದಾಗಿ ಕೆಲಸ ಮಾಡಬೇಕು. ಪ್ರೀತಿ, ವಿಶ್ವಾಸದಲ್ಲಿ ಕೆಲಸ ಮಾಡಬೇಕು. ಮನಸ್ಸಿನ ಕಲ್ಮಶ ಮೊದಲು ತೆಗೆಯಬೇಕು ಎಂದ ಅವರು, ಸ್ವಚ್ಛತೆ ನಿತ್ಯದ ಕಾರ್ಯ ಆಗಬೇಕಿದೆ ಎಂದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಪ್ರತಿಯೊಬ್ಬರೂ ಪ್ರತಿ ಮನೆಯಲ್ಲೂ, ಮನೆ ಸುತ್ತಲಿನ ಪರಿಸರದಲ್ಲೂ ಸ್ವಚ್ಛತಾ ಕಾರ್ಯ ಮಾಡಿದರೆ ಇಡೀ ದೇಶ ಸ್ವಚ್ಛವಾಗುತ್ತದೆ ಎಂದರು.ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಮಾತನಾಡಿ, ಗಾಂಧೀಜಿ ಅವರ ಜೀವನವೇ ಆದರ್ಶ. ಅದನ್ನು ಎಲ್ಲರೂ ಪಾಲಿಸಬೇಕು ಎಂದರು.ಈ ವೇಳೆ ಡಿಎಸ್ಪಿ ಗಣೇಶ ಕೆ.ಎಲ್., ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ಪೌರಾಯುಕ್ತ ಕಾಂತರಾಜು, ಪ್ರಮುಖರಾದ ವೆಂಕಟೇಶ ಹೊಸಬಾಳೆ, ಭಾರತ ಸೇವಾ ದಳದ ಅಧ್ಯಕ್ಷ ವಿ.ಎಸ್. ನಾಯ್ಕ, ಆರ್.ಎಂ. ವೆರ್ಣೇಕರ್ ಸೇರಿದಂತೆ ಮತ್ತಿತರರು ಇದ್ದರು.ಬಿಡ್ಕಿಬೈಲ್‌ನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ನೇತೃತ್ವದಲ್ಲಿ ಹಳೆ ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ(ಗಾಂಧಿ ನಡಿಗೆ) ಶಿವಾಜಿ ಚೌಕ, ಸಿಪಿ ಬಜಾರ್, ದೇವಿಕೆರೆ, ಅಶ್ವಿನಿ ಸರ್ಕಲ್ ಮೂಲಕ ಇಂದಿರಾ ನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಆಗಮಿಸಿ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾಲ್ನಡಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ರಾಮರಾಜ್ಯದ ಕನಸು ನನಸಾಗಲಿ