ಸಿರಿಗೆರೆ: ಐದು ವರ್ಷಗಳಿಗೊಮ್ಮೆ ಹುಟ್ಟಿ ಕೆಲವು ನಾಯಕರು ಇನ್ನಿಲ್ಲದ ಮಾತುಗಳಿಂದ ಜನರ ದಾರಿ ತಪ್ಪಿಸುತ್ತಾರೆ. ಅಂತಹ ನಾಯಕರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
30 ವರ್ಷಗಳಿಂದ ಶಾಸಕನಾಗಿರುವ ನಾನು ಕ್ಷೇತ್ರದಲ್ಲಿ ನಿರ್ವಂಚನೆಯಿಂದ ಕೆಲಸ ಮಾಡಿದ್ದೇನೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಡಿ.ಮೆದಿಕೇರಿಪುರ ಇಲ್ಲಿನ ಗಣಿಗಾರಿಕೆಯಿಂದ ಧೂಳು ಹಿಡಿದು ಹೋಗಿತ್ತು. ಆಗ ಇಲ್ಲಿನ ಜನರ ಕಷ್ಟಗಳನ್ನು ಅರಿತು ಮೈನ್ಸ್‌ಗಳೊಂದಿಗೆ ಹೋರಾಟ ಮಾಡಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವಂತೆಯೂ ಹಾಗೂ ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ವಿಮೆ ಸೌಲಭ್ಯ ನೀಡಬೇಕೆಂದು ಹೋರಾಡಿದ್ದೆ ಎಂದು ನೆನಪು ಮಾಡಿಕೊಂಡರು.
ಕ್ಷೇತ್ರದಲ್ಲಿ ೪೯೩ ಹಳ್ಳಿಗಳು ಇವೆ. ಇವೆಲ್ಲವನ್ನು ಹಸುಗಳಂತೆ ನೋಡಿಕೊಂಡಿದ್ದೇನೆ. ಹಲವು ಹಾಲು ಕೊಡದ ಹಸುಗಳೂ ಇವೆ. ಅವೆಲ್ಲವನ್ನೂ ಏಕಮತದಿಂದ ತಾರತಮ್ಯ ಮಾಡದೇ ಒಟ್ಟಿಗೇ ಕೊಂಡೊಯ್ಯುತ್ತಿದ್ದೇನೆ. ಯಾರಲ್ಲಿಯೂ ಭಿನ್ನಭೇದ ಮಾಡದೆ ಕೆಲಸ ಮಾಡಿದ್ದೇನೆ ಎಂದರು.ಗಣಿಗಾರಿಕೆಯ ಕಂಪನಿಗಳು ಕೊಡುವ ಶೇಕಡ ೨ರ ಸಿಎಸ್‌ಆರ್ ನಿಧಿಯಿಂದ ಈಗ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ ಎಂದ ಅವರು, ನಮ್ಮ ಹಳ್ಳಿಗಳಲ್ಲಿನ ಮಕ್ಕಳಿಗೂ ಸೂಕ್ತ ರೀತಿಯ ಶಿಕ್ಷಣ ನೀಡಬೇಕಿದೆ. ಅದಕ್ಕಾಗಿ ಸರ್ಕಾರಿ ಶಾಲೆಗಳನ್ನು ಸಶಕ್ತಗೊಳಿಸಲಾಗುತ್ತಿದೆ. ಯಾವುದೇ ಖಾಸಗಿ ಶಾಲೆಗಳಲ್ಲಿ ಸಿಗುವ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೂ ಸಿಗಬೇಕು. ಬಸ್ ಸೌಲಭ್ಯ ಇಲ್ಲದ ಶಾಲೆಗಳ ಮಕ್ಕಳಿಗೆ ಸ್ವಂತ ಹಣದಲ್ಲಿ ಬಸ್ ಸೌಲಭ್ಯ ಒದಗಿಸಿಕೊಟ್ಟಿದ್ದೇನೆ. ಅವರಿಗೆ ಉಚಿತ ಊಟ, ಪುಸ್ತಕ, ಸಮವಸ್ತ್ರ ಮುಂತಾದ ಸೌಲಭ್ಯಗಳು ದೊರೆಯುತ್ತಿವೆ ಎಂದರು.
ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಅವು ಖಾಸಗಿ ಸಂಸ್ಥೆಗಳ ಶಾಲೆಗಳಂತೆಯೇ ಇರಬೇಕೆನ್ನುವ ಅಪೇಕ್ಷೆ ಶಾಸಕರದ್ದು. ಅದಕ್ಕಾಗಿಯೇ ಅವರು ಕ್ಷೇತ್ರದಲ್ಲಿ ಸುಮಾರು ೧೫೦ ಶಾಲೆಗಳಿಗೆ ಅನುದಾನ ನೀಡಿ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂದರು.
ಯುವಮೋರ್ಚಾ ಕಾರ್ಯದರ್ಶಿ ಕೆ.ಬಿ.ಮೋಹನ್ ಮಾತನಾಡಿ, ಶಾಸಕ ಎಂ.ಚಂದ್ರಪ್ಪ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿದ್ದಾರೆ. ಕ್ಷೇತ್ರದ ತುಂಬಾ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡುತ್ತಿದ್ದಾರೆ. ಇವರ ಕಾರ್ಯವೈಖರಿಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಮೆಚ್ಚುಗೆ ಸೂಚಿಸಿದ್ದಾರೆ ಎಂದರು.
ಶಾಸಕ ಎಂ. ಚಂದ್ರಪ್ಪ ಜನಾನುರಾಗಿಯಾಗಿ ಕ್ಷೇತ್ರದ ಎಲ್ಲ ಕಡೆ ಸಮಾನದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ಗ್ರಾಮವಾದ ಡಿ.ಮೆದಿಕೇರಿಪುರದಲ್ಲಿ ನಮ್ಮ ಬೇಡಿಕೆಗಳಿಗೆ ಮನ್ನಿಸಿ ಇಂದು ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಿದ್ದಾರೆ. ಇಂತಹ ಶಾಸಕರು ನಮಗೆ ಅಪರೂಪಕ್ಕೆ ಸಿಕ್ಕಿದ್ದಾರೆ ಎಂದು ಗ್ರಾಮದ ಕುಬೇರಮ್ಮ ಶಾಸಕರಿಗೆ ವೇದಿಕೆ ಮೇಲೆ ಸಕ್ಕರೆ ತಿನ್ನಿಸಿದರು. ಕಲ್ಯಾಣ ಮಂಟಪ ನಿರ್ಮಿಸಿ ಕೊಡಿ