ವಿಷ ಜಂತು ಹರಡುವವರ ಬಗ್ಗೆ ಎಚ್ಚರವಿರಲಿ

KannadaprabhaNewsNetwork |  
Published : Sep 01, 2025, 01:04 AM IST
ಅಥಣಿ ತಾಲೂಕಿನ ಅನಂತಪುರ ಗ್ರಾಮದ ತುಕಾರಾಮ ಇರಕರ ಕುಟುಂಬಕ್ಕೆ ಗಚ್ಚಿನ ಮಠದ ಶ್ರೀಗಳು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಭೇಟಿ ನೀಡಿ ಅರಿವು ಮೂಡಿಸಿದರು. | Kannada Prabha

ಸಾರಾಂಶ

  ಮೌಢ್ಯದ ವಿಷ ಜಂತುಗಳನ್ನು ಹರಡುವ ವ್ಯಕ್ತಿಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಜಾಗೃತ ಮನಸ್ಸುಗಳು ಒಗ್ಗೂಡಿ ಮೌಢ್ಯ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಕಿತ್ತು ಹಾಕಬೇಕು. ಪ್ರಜ್ಞಾವಂತ ಮನಸ್ಸುಗಳು ಅರಿವಿನ ಸಿಂಚನವನ್ನು ಮೂಡಿಸುವ ಅಗತ್ಯವಿದೆ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.

 ಅಥಣಿ :  ನಂಬಿಕೆಯ ಬೀಜದಲ್ಲಿ ಮೌಢ್ಯದ ವಿಷ ಜಂತುಗಳನ್ನು ಹರಡುವ ವ್ಯಕ್ತಿಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಜಾಗೃತ ಮನಸ್ಸುಗಳು ಒಗ್ಗೂಡಿ ಮೌಢ್ಯ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ಕಿತ್ತು ಹಾಕಬೇಕು. ಪ್ರಜ್ಞಾವಂತ ಮನಸ್ಸುಗಳು ಅರಿವಿನ ಸಿಂಚನವನ್ನು ಮೂಡಿಸುವ ಅಗತ್ಯವಿದೆ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.

ತಾಲೂಕಿನ ಅನಂತಪುರದಲ್ಲಿ ಹರಿಯಾಣದ ವಿವಾದಾತ್ಮಕ ಸಂತ ರಾಮಪಾಲ ಅವರ ಪ್ರವಚನಗಳಿಗೆ ಪ್ರಭಾವಿತರಾಗಿ ದೇಹತ್ಯಾಗಕ್ಕೆ ಮುಂದಾಗಿದ್ದ ಕುಟುಂಬಸ್ಥರಿಗೆ ಸಾಂತ್ವನ ಹಾಗೂ ಅರಿವು ಮೂಡಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಅನಂತಪುರ ಗ್ರಾಮದಲ್ಲಿ ತುಕಾರಾಂ ಇರಕರ ಕುಟುಂಬ ಜ್ಞಾನಗಂಗಾ ಧಾರ್ಮಿಕ ಪುಸ್ತಕದ ಪ್ರಭಾವಕ್ಕೆ ಒಳಗಾಗಿದ್ದಾರೆ. ಸೆಪ್ಟೆಂಬರ್ 8ರಂದು ದೇಹಸಮೇತ ಸ್ವರ್ಗಕ್ಕೆ ಹೋಗುವ ಮಾತುಗಳನ್ನಾಡುತ್ತಿದ್ದಾರೆ. ಜೀವ ಮತ್ತು ಜೀವನ ಅಮೂಲ್ಯವಾದದ್ದು, ಯಾವುದೋ ಮೌಢ್ಯಕ್ಕೆ ಒಳಗಾಗಿ ಈ ಕುಟುಂಬ ದೇಹತ್ಯಾಗ ಮಾಡುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದಿಂದ ಮೌಢ್ಯತೆಯ ವಿರುದ್ಧ ಜನ ಜಾಗೃತಿ ಮೂಡಿಸುವ ಆಂದೋಲನ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದ ಇಂದಿನ ಕಾಲದಲ್ಲಿಯೂ ಧಾರ್ಮಿಕತೆ ಹೆಸರಿನಲ್ಲಿ ಮುಗ್ಧ ಜನರನ್ನು ವಂಚನೆ ಮಾಡುವ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದೆ. ಜನ ಜಾಗೃತವಾಗದಿದ್ದರೆ ಇಂತಹ ಶೋಷಣೆಗಳು ನಿರಂತರವಾಗಿ ನಡೆಯುತ್ತವೆ. ಅನಿಷ್ಟತೆ ತೊಲಗಬೇಕು ಎಂದರೆ ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯಕುಮಾರ ಅಡಹಳ್ಳಿ ಮಾತನಾಡಿ, ಪತ್ರಕರ್ತರು ಕೇವಲ ಸುದ್ದಿಗಳನ್ನು ಬರೆಯುವುದು ಮಾತ್ರವಲ್ಲ, ಸಾಮಾಜಿಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಇಂತಹ ಶೋಷಣೆ, ಮೌಢ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವುದು ಅಗತ್ಯ. ಧರ್ಮದ ಹೆಸರಿನಲ್ಲಿ ಅಂದಾನುಕರುಣೆ ಆಚರಿಸಿ ಬದುಕಿಗೆ ವಿರಾಮವಿಟ್ಟುಕೊಳ್ಳುವುದು ದುರಾದೃಷ್ಟಕರ ಸಂಗತಿ. ಡೋಂಗಿ ಬಾಬಾ ಅವರ ಸಂದೇಶವನ್ನು ನಂಬಿ ಈ ಕುಟುಂಬ ದೇಹ ತ್ಯಾಗ ಮಾಡುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈ ಕುಟುಂಬಸ್ಥರ ಮನವೊಲಿಸಿ, ಜಾಗೃತಿ ಮೂಡಿಸಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ತೆಲಸಂಗ ಹಿರೇಮಠದ ವಿರೇಶ ದೇವರು, ರಾಜು ಗಾಲಿ, ಅಣ್ಣಾಸಾಹೇಬ ತೆಲಸoಗ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಶಿವಕುಮಾರ ಅಪರಾಜ, ರಮೇಶ ಬಾದವಾಡಗಿ, ರಾಕೇಶ ಮೈಗೂರ, ಸಂದೀಪ ಘಟಕಾಂಬಳೆ, ಕಲ್ಲಪ್ಪ ಕನ್ನಾಳ, ಶಿವಾನಂದ ಪೂಜಾರಿ, ಜಬ್ಬಾರ ಚಿಂಚಲಿ, ಪರಶುರಾಮ ನಂದೇಶ್ವರ, ಅಜಿತ ಕಾಂಬಳೆ, ಸಂತೋಷ ಬಡಕಂಬಿ, ಶೇಖರ ತೆವರಟ್ಟಿ, ವಿಲಾಸ್ ಕಾಂಬಳೆ ಸೇರಿ ಇತರರು ಇದ್ದರು. 

ನಾವು ಹರಿಯಾಣದ ಬಾಬಾ ರಾಮಪಾಲ ಅವರ ಸತ್ಸಂಗದಲ್ಲಿ ಅನೇಕ ಬಾರಿ ಪಾಲ್ಗೊಂಡಿದ್ದೇವೆ. ಅವರು ನಮ್ಮ ಪಾಲಿನ ದೇವರು. ನಾವು ಯಾವುದೇ ರೀತಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬಾಬಾ ಅವರೇ ಸೆಪ್ಟೆಂಬರ್ 8ರಂದು ನಮ್ಮನ್ನ ದೇಹ ಸಮೇತ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ನಮಗೆ ಬಾಬಾ ಅವರ ಸಂದೇಶವೇ ಮುಖ್ಯ, ಅವರ ಆಜ್ಞೆಯನ್ನು ಮಾತ್ರ ಪಾಲಿಸುತ್ತೇವೆ. 

ತುಕಾರಾಮ ಇರಕರ, ಅನಂತಪುರ

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ